ಪ್ರತಾಪಗಢ (ರಾಜಸ್ಥಾನ): ಕೊರೊನಾ ಸೋಂಕು ಹರಡಲಾರಂಭಿಸಿದ ನಂತರವಷ್ಟೇ ನಾವೆಲ್ಲ ಸಾಮಾಜಿಕ ಅಂತರ ಪಾಲಿಸಲಾರಂಭಿಸಿದ್ದು. ಆದರೆ ಸಾಮಾಜಿಕ ಅಂತರ ಕಾಪಾಡುವುದನ್ನು ತಮ್ಮ ನಿತ್ಯದ ಜೀವನದಲ್ಲೇ ಅಳವಡಿಸಿಕೊಂಡಿರುವ ಬುಡಕಟ್ಟು ಜನಾಂಗವೊಂದು ಭಾರತದಲ್ಲಿದೆ. ನೂರಾರು ವರ್ಷಗಳಿಂದ ಇವರು ಹೀಗೆಯೇ ಬದುಕುತ್ತಿದ್ದಾರೆ.
ಪ್ರತಾಪಗಢ ಜಿಲ್ಲೆಯ ಪೀಪಲಖೂಂಟ್ ಉಪವಿಭಾಗದ ಘಂಟಾಲಿಯಲ್ಲಿ ಸಾಲು ಸಾಲಾಗಿ ಆದಿವಾಸಿ ಜನಾಂಗದವರ ಗುಡಿಸಲುಗಳಿವೆ. ಕಳೆದ ಹಲವಾರು ದಶಕಗಳಿಂದ ಈ ಜನಾಂಗದವರು ಸಾಮಾಜಿಕ ಅಂತರ ಕಾಯ್ದುಕೊಂಡೇ ಬದುಕುತ್ತಿದ್ದಾರೆ ಎಂಬುದು ಇಲ್ಲಿಗೆ ಹೋದವರಿಗೆ ಅರ್ಥವಾಗುತ್ತದೆ. ಇವರು ಒಂದು ಗುಡಿಸಲು ಪಕ್ಕದಲ್ಲೇ ಇನ್ನೊಂದು ಗುಡಿಸಲು ನಿರ್ಮಿಸುವುದೇ ಇಲ್ಲ. ಒಂದು ಕುಟುಂಬದಲ್ಲಿ ಮೂವರು ಅಣ್ಣ ತಮ್ಮಂದಿರಿದ್ದರೆ ಎಲ್ಲರೂ ಪ್ರತ್ಯೇಕ ಗುಡಿಸಲುಗಳಲ್ಲೇ ವಾಸಿಸುತ್ತಾರೆ. ಗುಡಿಸಲುಗಳ ಮಧ್ಯೆ ಸಾಕಷ್ಟು ದೂರವಿರುವಂತೆಯೂ ನೋಡಿಕೊಳ್ಳುತ್ತಾರೆ. ಅಣ್ಣ ತಮ್ಮಂದಿರಾಗಿರಲಿ, ಬಂಧು-ಬಳಗವೇ ಆಗಿರಲಿ ದೂರವಿದ್ದಷ್ಟೂ ಸ್ನೇಹ, ಪ್ರೀತಿ ಜಾಸ್ತಿ ಎಂಬ ನಂಬಿಕೆಯೇ ಇದಕ್ಕೆ ಕಾರಣವಂತೆ.
ಕೈ ಮಿಲಾಯಿಸಲು ಹಿಂದೇಟು: ಇಲ್ಲಿನ ಆದಿವಾಸಿಗಳು ಯಾರೊಂದಿಗೂ ಕೈ ಮಿಲಾಯಿಸಿ ಮಾತನಾಡುವುದಿಲ್ಲ. ಅದರ ಬದಲು ಜೈ ಜೌಹಾರ್, ಜೈ ಮಾಲಿಕ್, ಜೈ ಗುರು ಎಂದು ಹೇಳಿ ದೂರದಿಂದಲೇ ನಮಸ್ಕರಿಸುತ್ತಾರೆ. ಅತಿಥಿಗಳು ಬಂದರೆ ಕೂರಲು ಮನೆಯ ಹೊರಗೆ ಚಿಕ್ಕ ಪ್ರಾಂಗಣ ನಿರ್ಮಿಸಲಾಗಿರುತ್ತದೆ. ಅತಿಥಿಗಳು ನೇರವಾಗಿ ಮನೆಯ ಒಳಗೆ ಹೋಗುವಂತಿಲ್ಲ.