ತಿರುವನಂತಪುರಂ:ಕೇರಳದ ತಿರುವನಂತಪುರಂನ ಸಿಬಿಐ ವಿಶೇಷ ನ್ಯಾಯಾಲಯವು ಬರೋಬ್ಬರಿ 28 ವರ್ಷದ ಬಳಿಕ ಹತ್ಯೆ ಪ್ರಕರಣವೊಂದಕ್ಕೆ ತೀರ್ಪು ನೀಡಿದೆ.
1992 ರಲ್ಲಿ ಸಿಸ್ಟರ್ ಅಭಯಾ (21) ಎಂಬಾಕೆಯನ್ನು ಕೊಲೆ ಮಾಡಿ, ಆಕೆಯ ಶವವನ್ನು ಕೊಟ್ಟಾಯಂನ ಕಾನ್ವೆಂಟ್‌ನ ಬಾವಿಯೊಳಗೆ ಎಸೆಯಲಾಗಿತ್ತು. ಆಗಿನ ಬಿಷಪ್‌ನ ಕಾರ್ಯದರ್ಶಿಯೂ ಆಗಿದ್ದ ಫಾದರ್ ಥಾಮಸ್ ಕೊಟ್ಟೂರು ಹಾಗೂ ಅಭಯಾ ಅವರ ಹಾಸ್ಟೆಲ್ ಮೇಟ್ ಆಗಿದ್ದ ಸಿಸ್ಟರ್ ಸೆಫಿ ಪ್ರಕರಣ ಅಪರಾಧಿಗಳೆಂದು ಸಿಬಿಐ ನ್ಯಾಯಾಲಯ ಘೋಷಣೆ ಮಾಡಿದೆ. ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಗೊಳಿಸಲಿದೆ.
ಅಂದು ನಡೆದಿದ್ದು...
ಫಾದರ್ ಹಾಗೂ ಸೆಫಿ ನಡುವಿದ್ದ ಅಕ್ರಮ ಸಂಬಂಧ ಸಿಸ್ಟರ್ ಅಭಯಾಗೆ ತಿಳಿದಿದ್ದೇ ಕೊಲೆಗೆ ಪ್ರಮುಖ ಕಾರಣ. 1992ರ ಮಾರ್ಚ್ 27ರ ಮುಂಜಾನೆ 4.15 ರಿಂದ 5 ಗಂಟೆ ಸುಮಾರಿಗೆ ಫಾದರ್ ಹಾಗೂ ಸೆಫಿ ಏಕಾಂತದಲ್ಲಿರುವುದನ್ನು ಅಭಯಾ ನೋಡಿದ್ದರು. ಇನ್ನು ಆಕೆ ವಿಷಯವನ್ನು ಬಹಿರಂಗಪಡಿಸುವ ಭಯ ಹೊಂದಿದ್ದ ಇಬ್ಬರೂ ಆಕೆಗೆ ಮೊಂಡಾದ ವಸ್ತುವಿನಿಂದ ಹೊಡೆದಿದ್ದಾರೆ. ಬಿದ್ದ ಹೊಡೆತವು ಅಭಯಾ ಪ್ರಾಣವನ್ನು ಹಾರಿಸಿತ್ತು. ಬಳಿಕ ಇಬ್ಬರೂ ಸೇರಿ ಆಕೆಯ ಶವವನ್ನು ಬಾವಿಗೆ ಎಸೆದಿದ್ದಾರೆ.
ಈ ಪ್ರಕರಣದಲ್ಲಿ ಕೇಳ್ಪಟ್ಟ ಇನ್ನೊಂದು ಹೆಸರು ಫಾದರ್ ಜೋಸ್ ಪೂತ್ರಿಕ್ಕಾಯಿಲ್. ಆ ಇಬ್ಬರ ನಡುವಿನ ಅಕ್ರಮ ಸಂಬಂಧ ಜೋಸ್ಗೂ ತಿಳಿದಿತ್ತು. ಕೊಲೆಯಲ್ಲಿ ಆತನೂ ಶಾಮೀಲಾಗಿದ್ದಾನೆಂದು ತನಿಖೆ ತಿಳಿಸಿತ್ತು. ಆದರೆ, ಕಳೆದ ಎರಡು ವರ್ಷದ ಹಿಂದೆ ಸಿಬಿಐ ನ್ಯಾಯಾಲಯವು ಪೂತ್ರಿಕ್ಕಾಯಿಲ್ನನ್ನು ಖುಲಾಸೆಗೊಳಿಸಿತ್ತು.
ಈ ಸಂದರ್ಭದಲ್ಲಿ ತಮ್ಮ ತಪ್ಪು ಇಲ್ಲ ಎಂದು ಸಿಸ್ಟರ್ ಸೆಫಿ ಹಾಗೂ ಫಾದರ್ ಕೋರ್ಟ್ಗೆ ಅಪೀಲ್ ಮಾಡಿದ್ದರು. ಆದರೆ, ಕೋರ್ಟ್ ಅವರ ಅರ್ಜಿಯನ್ನು ತಿರಸ್ಕಾರಗೊಳಿಸಿತ್ತು. ಈ ಘಟನೆಯನ್ನು ಮೊದಲು ಆತ್ಮಹತ್ಯೆ ಎಂದು ಪೊಲೀಸ್ ಹಾಗೂ ಅಪರಾಧ ಶಾಖೆ ಅಧಿಕಾರಿಗಳು ಕೇಸ್ ದಾಖಲಿಸಿತ್ತು. ಆದರೆ, ನಂತರ ನಡೆದ ಅನೇಕ ಪ್ರತಿಭಟನೆಗಳು, ಅರ್ಜಿಗಳ ನಂತರ ಸಿಬಿಐ ಕೈ ಸೇರಿದ ತನಿಖೆ ಮತ್ತೆ ಪುಟ ತೆರೆಯಿತು. ಅದಕ್ಕೆ ಬರೋಬ್ಬರಿ 28 ವರ್ಷಗಳ ಬಳಿಕ ಇಂದು ಸರಿಯಾದ ನ್ಯಾಯವನ್ನು ನೀಡಿದೆ.