ಕರ್ನಾಟಕ

karnataka

By

Published : Nov 22, 2019, 11:01 AM IST

ETV Bharat / bharat

ಶಿವಸೇನೆ ಮುಖ್ಯಮಂತ್ರಿಯೇ ಐದು ವರ್ಷ ಅಧಿಕಾರ ನಡೆಸುತ್ತಾರೆ: ಸಂಜಯ್​ ರಾವತ್​

ಮಹಾರಾಷ್ಟ್ರದಲ್ಲಿ ಎನ್​​ಸಿಪಿ-ಕಾಂಗ್ರೆಸ್​​ ಹಾಗೂ ಶಿವಸೇನೆ ಪಕ್ಷಗಳು ಸೇರಿ 'ಮಹಾ ವಿಕಾಸ್​ ಅಘಾದಿ' ಮೈತ್ರಿ ಸರ್ಕಾರ ರಚನೆಗೆ ಅಂತಿಮ ಹಂತದ ತಯಾರಿ ನಡೆಸುತ್ತಿರುವ ವೇಳೆಯಲ್ಲೇ ಶಿವಸೇನೆ ಸಂಸದ ಸಂಜಯ್​ ರಾವತ್ ನೀಡಿದ ಹೇಳಿಕೆ ಕುತೂಹಲ ಕೆರಳಿಸಿದೆ.

ಮಹಾ ವಿಕಾಸ್​ ಅಘಾದಿ

ಮುಂಬೈ:ಎನ್​​ಸಿಪಿ-ಕಾಂಗ್ರೆಸ್​​ ಹಾಗೂ ಶಿವಸೇನೆ ಪಕ್ಷಗಳು ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಾಧ್ಯತೆ ನಿಚ್ಚಳವಾಗಿದೆ. ಇಂದು ಮಧ್ಯಾಹ್ನ ಮೈತ್ರಿ ನಾಯಕರೆಲ್ಲಾ ಸೇರಿ ಅಂತಿಮ ಸುತ್ತಿನ ಸಭೆ ನಡೆಸಲಿದ್ದು, ರಾಜ್ಯದಲ್ಲಿ 'ಮಹಾ ವಿಕಾಸ್ ಅಘಾದಿ' ಸರ್ಕಾರದಲ್ಲಿ ತಮ್ಮ ತಮ್ಮ ಪಾತ್ರದ ಕುರಿತು ಚರ್ಚೆ ನಡೆಸಲಿದ್ದಾರೆ. ಇದೇ ವೇಳೆ ಶಿವಸೇನೆ ಮುಖ್ಯಮಂತ್ರಿಯೇ ಐದು ವರುಷ ಅಧಿಕಾರದಲ್ಲಿರಲಿದ್ದಾರೆ ಎಂಬ ಹೇಳಿಕೆಯನ್ನು ಶಿವಸೇನೆ ಸಂಸದ ಸಂಜಯ್​ ರಾವತ್​ ನೀಡಿದ್ದಾರೆ.

ಈ ಮೂರು ಪ್ರಮುಖ ಪಕ್ಷಗಳ ಹೊರತಾಗಿ, ಸ್ವಾಭಿಮಾನಿ ಶೆಕ್ತಾರಿ ಸಂಘಟನಾ, ರೈತ ಮತ್ತು ಕಾರ್ಮಿಕರ ಪಕ್ಷ, ಸಮಾಜವಾದಿ ಪಕ್ಷ ಹಾಗೂ ಇತರೆ ಸಣ್ಣ ಪಕ್ಷಗಳೂ ಸಹ ಮೈತ್ರಿಯ ಭಾಗವಾಗಲಿವೆ. ಬಹುತೇಕ ಇವುಗಳು ಎನ್​​ಸಿಪಿ-ಕಾಂಗ್ರೆಸ್​​ ಹಾಗೂ ಶಿವಸೇನೆ ಮೈತ್ರಿಕೂಟದ ಬಹು ನಿರೀಕ್ಷಿತ ಹೆಸರಾದ 'ಮಹಾ ವಿಕಾಸ್ ಅಘಾದಿ' ಸರ್ಕಾರದ ಭಾಗವಾಗಲಿದ್ದಾರೆ.

ಮೈತ್ರಿ ಸರ್ಕಾರವನ್ನು ನಡೆಸಲು ಬೇಕಾಗಿರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಕೆಲವು ಸರಣಿ ಸಭೆಗಳು ಮತ್ತು ಹಲವಾರು ಸುತ್ತಿನ ಚರ್ಚೆಗಳ ನಂತರ ರೂಪಿಸಲಾಗಿದೆ. ಇನ್ನೆರಡು ಸಭೆಗಳ ಬಳಿಕ ಮಿತ್ರ ಪಕ್ಷಗಳಿಗೆ ಶೀಘ್ರದಲ್ಲೇ ಅಧಿಕಾರ ಹಂಚಿಕೆ ಮಾಡಲಾಗುವುದು ಎಂದು ಕಾಂಗ್ರೆಸ್ ಮತ್ತು ಎನ್‌ಸಿಪಿ ನಾಯಕರು ತಿಳಿಸಿದ್ದಾರೆ. ಆದರೆ ಇವುಗಳ ಹೊರತಾಗಿ ಪ್ರತಿಯೊಂದು ಪಕ್ಷಗಳೂ ಪ್ರತ್ಯೇಕ ಸಭೆಗಳನ್ನು ನಡೆಸಲಿವೆ. ಇಂದು ಮಧ್ಯಾಹ್ನ ಮುಂಬೈನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗುವಂತೆ ತಮ್ಮೆಲ್ಲಾ ಶಾಸಕರಿಗೆ ಶಿವಸೇನೆ ಕರೆ ನೀಡಿದೆ. ಈ ಸಭೆಯ ಬಳಿಕ ಪಕ್ಷದ ಎಲ್ಲಾ ನಾಯಕರೂ ರಾಜಭವನಕ್ಕೆ ಭೇಟಿ ನೀಡಿ ಸರ್ಕಾರ ರಚಿಸುವ ನಿರ್ಧಾರವನ್ನು ರಾಜ್ಯಪಾಲರಿಗೆ ತಿಳಿಸಲಿದ್ದಾರೆ.

ಕಳೆದ ತಿಂಗಳು ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 288 ಸ್ಥಾನಗಳಲ್ಲಿ ಬಿಜೆಪಿ-108, ಶಿವಸೇನಾ-56, ಎನ್​ಸಿಪಿ 54 ಹಾಗೂ ಕಾಂಗ್ರೆಸ್​ 44 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿಯೊಂದಿಗೆ ಮೈತ್ರಿ ನಿರಾಕರಿಸಿದ ಶಿವಸೇನೆ ಇದೀಗ ಎನ್​​ಸಿಪಿ-ಕಾಂಗ್ರೆಸ್​​ ಜೊತೆ ಮೈತ್ರಿಗೆ ನಿರ್ಧರಿಸಿದ್ದು, ಮೂವರು ಸೇರಿ 'ಮಹಾ ವಿಕಾಸ್ ಅಘಾದಿ' ಸರ್ಕಾರ ರಚಿಸಲು ತಯಾರಿ ನಡೆಸಿದ್ದಾರೆ.

ಇದೀಗ ಶಿವಸೇನೆ ಸಂಸದ ಸಂಜಯ್​ ರಾವತ್, ಶಿವಸೇನೆ ಮುಖ್ಯಮಂತ್ರಿಯೇ ಐದು ವರುಷ ಅಧಿಕಾರದಲ್ಲಿರಲಿದ್ದಾರೆ ಎಂಬ ಹೇಳಿಕೆ ನೀಡಿರುವುದು ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿ ಕುರಿತ ಚರ್ಚೆಗೆ ಇನ್ನಷ್ಟು ಬಿಸಿ ಮುಟ್ಟಿಸಿದಂತಿದೆ.

ABOUT THE AUTHOR

...view details