ನವದೆಹಲಿ:ರಾಜೀನಾಮೆ ಅಂಗೀಕರಿಸಲು ಸ್ಪೀಕರ್‌ಗೆ ನಿರ್ದೇಶನ ಕೋರಿ ಮೈತ್ರಿ ಸರ್ಕಾರದ 15 ಮಂದಿ ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.
ಮುಖ್ಯ ನ್ಯಾ. ರಂಜನ್ ಗೊಗೋಯಿ ಹಾಗೂ ನ್ಯಾ.ದೀಪಕ್ ಗುಪ್ತ ಮತ್ತು ನ್ಯಾ. ಅನಿರುದ್ಧ ಬೋಸ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸುತ್ತಿದೆ.
ಅತೃಪ್ತ ಶಾಸಕರ ರಾಜೀನಾಮೆ ಹಾಗು ಅನರ್ಹತೆ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಕಳೆದ ವಾರ ದೇಶದ ಅತ್ಯುನ್ನತ ಕೋರ್ಟ್ ಸ್ಪೀಕರ್‌ಗೆ ಆದೇಶಿಸಿತ್ತು. ರಾಜಕೀಯ ಬೆಳವಣಿಗೆಯ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿ, ವಿಚಾರಣೆಯನ್ನು ಇವತ್ತಿಗೆ ಮುಂದೂಡಿತ್ತು.
ತಾವು ಸಲ್ಲಿಸಿರುವ ರಾಜೀನಾಮೆಯನ್ನು ಶೀಘ್ರದಲ್ಲೇ ಅಂಗೀಕಾರ ಮಾಡುವಂತೆ ಸ್ಪೀಕರ್ ಕೆ. ಆರ್ ರಮೇಶ್ ಕುಮಾರ್ ಅವರಿಗೆ ನಿರ್ದೇಶನ ನೀಡುವಂತೆ ಕೋರಿ ಶಾಸಕರಾದ ಮುನಿರತ್ನ, ಕೆ. ಸುಧಾಕರ್, ಎಂಟಿಬಿ ನಾಗರಾಜ್ ಹಾಗು ಆನಂದ್ ಸಿಂಗ್ ಮೇಲ್ಮನವಿ ಸಲ್ಲಿಸಿದ್ದರು. ಇನ್ನು ಈಗಾಗಲೇ ಜೆಡಿಎಸ್ ಮತ್ತು ಕಾಂಗ್ರೆಸ್ 10 ಮಂದಿ ಶಾಸಕರು ಸಲ್ಲಿಸಿದ್ದ ಅರ್ಜಿಯ ಜೊತೆ ಈ ಮೇಲ್ಮನವಿಯನ್ನೂ ಪರಿಗಣಿಸುವಂತೆ ಹಿರಿಯ ವಕೀಲ ಮುಕುಲ್ ರೋಹ್ಟಗಿ ಮುಖ್ಯ ನ್ಯಾಯಮೂರ್ತಿ ಪೀಠದೆದರು ಮನವಿ ಮಾಡಿದ್ದರು.