ಅಜ್ಮೀರ್ (ರಾಜಸ್ಥಾನ): ಶಂಕಿತ ರೋಗಿಯ ಎಕ್ಸರೇ ಸ್ಕ್ಯಾನ್ ಶೀಟ್ ಬಳಸಿ ಐದು ಸೆಕೆಂಡುಗಳಲ್ಲಿ ಕೋವಿಡ್-19 ಪತ್ತೆ ಹಚ್ಚುವಂತಹ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿರುವುದಾಗಿ ಡೆಹ್ರಾಡೂನ್ ತಾಂತ್ರಿಕ ವಿಶ್ವವಿದ್ಯಾಲಯದ ಸಾಫ್ಟ್‌ವೇರ್ ಎಂಜಿನಿಯರ್ ಹೇಳಿಕೊಂಡಿದ್ದಾರೆ.
ಎಕ್ಸ್ರೇ ಶೀಟ್ ಅಪ್‌ಲೋಡ್ ಮಾಡಿದ್ರೆ 5 ಸೆಕೆಂಡ್ಗಳಲ್ಲಿ ಕೊರೊನಾ ಪತ್ತೆ: ಯಾವುದೀ ಸಾಫ್ಟ್‌ವೇರ್
ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ದೃಷ್ಟಿಯಿಂದ, ರಾಜಸ್ಥಾನದ ಸಾಫ್ಟ್‌ವೇರ್ ಎಂಜಿನಿಯರ್ ದಿವ್ಯಾನ್ಶ್ ಬನ್ಸಲ್ ಶಂಕಿತ ರೋಗಿಯ ಎಕ್ಸರೆ ಸ್ಕ್ಯಾನ್ ಬಳಸಿ ಐದು ಸೆಕೆಂಡುಗಳಲ್ಲಿ ಕೊರೊನಾ ವೈರಸ್ ಪತ್ತೆ ಹಚ್ಚುವಂತಹ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದಾರೆ.
ಅಜ್ಮೀರ್ ಜಿಲ್ಲೆಯ ತೇಜ ಚೌಕ್ ನಿವಾಸಿ ಬನ್ಸಾಲ್ ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ಕೇವಲ ಐದು ನಿಮಿಷಗಳಲ್ಲಿ 1,000 ಜನರನ್ನು ಪರೀಕ್ಷಿಸುವಂತಹ ಸಾಫ್ಟ್ವೇರ್ನ್ನು ರಚಿಸಿದ್ದಾರಂತೆ. ಈ ಸಾಫ್ಟ್‌ವೇರ್, ಪರೀಕ್ಷಾ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ ವೈದ್ಯರಿಗೆ ಸೋಂಕು ತಗುಲುವ ಅಪಾಯವನ್ನೂ ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ. ಈ ಸಾಫ್ಟ್‌ವೇರ್ ಮೂಲಕ ಕೊರೊನಾ ಅಷ್ಟೇ ಅಲ್ಲ ನ್ಯುಮೋನಿಯಾ ಕೂಡ ಪತ್ತೆ ಮಾಡಬಹುದು.
ಇನ್ನು ಸಾಫ್ಟ್‌ವೇರ್ ಅನ್ನು ಸರ್ಕಾರ ಅನುಮೋದಿಸಿದರೆ ತಂತ್ರಜ್ಞಾನವನ್ನು ಉಚಿತವಾಗಿ ಹಂಚಿಕೊಳ್ಳುವುದಾಗಿ ಬನ್ಸಲ್ ಹೇಳಿದ್ದಾರೆ. ಇವರ ಪ್ರಕಾರ, ಕೊರೊನಾ ವೈರಸ್ಅನ್ನು ಗುರುತಿಸುವ ವಿಧಾನ ತುಂಬಾ ಸರಳ. ಮತ್ತು ಸಾಫ್ಟ್‌ವೇರ್‌ನಲ್ಲಿ ಶಂಕಿತ ವ್ಯಕ್ತಿಯ ಎಕ್ಸರೆ ಸ್ಕ್ಯಾನ್ನ್ನು ಅಪ್‌ಲೋಡ್ ಮಾಡುವ ಮೂಲಕ ವೈದ್ಯರು ತಕ್ಷಣ ಫಲಿತಾಂಶವನ್ನು ಪಡೆಯಬಹುದು.