ನವದೆಹಲಿ:ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ನಿನ್ನೆ ರೈತರು ನಡೆಸಿರುವ ಪ್ರತಿಭಟನೆ ಹಿಂಸಾಚಾರ ರೂಪ ಪಡೆದುಕೊಂಡು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವಿಷಯವಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು.
ರೈತರ ಪ್ರತಿಭಟನೆಯನ್ನು ರಾಹುಲ್ ಗಾಂಧಿ ಬೆಂಬಲಿಸಿಲ್ಲ, ಬದಲಾಗಿ ಪ್ರಚೋದನೆ ನೀಡಿದ್ದಾರೆ. ಸಿಎಎ(ನಾಗರಿಕ ಪೌರತ್ವ ಕಾಯ್ದೆ) ಸಮಯದಲ್ಲೂ ಇದೇ ರೀತಿ ಮಾಡಿದ್ದಾರೆ. ಜನರನ್ನು ಬೀದಿಗಿಳಿಯುವಂತೆ ಪ್ರೇರೆಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಓದಿ: ಕೊಟ್ಟ ಮಾತಿಗೆ ತಪ್ಪಿ ಹಿಂಸಾಚಾರದಲ್ಲಿ ರೈತ ಮುಖಂಡರೂ ಭಾಗಿ: ದೆಹಲಿ ಪೊಲೀಸ್ ಆಯುಕ್ತ
ರೈತರು ನಡೆಸುತ್ತಿದ್ದ ಆಂದೋಲನ ಪ್ರಚೋದಿಸಲು ಕಾಂಗ್ರೆಸ್ ನಿರಂತರವಾಗಿ ಪ್ರಯತ್ನ ನಡೆಸಿತ್ತು. ಜನವರಿ 26 ಟ್ರ್ಯಾಕ್ಟರ್ ಪರೇಡ್ ಎಂದು ಹೇಳಿದಾಗ ಪಂಜಾಬ್ ಸರ್ಕಾರ ಅಲ್ಲಿಂದ ಹೊರಡುವ ಟ್ರ್ಯಾಕ್ಟರ್ಗಳ ಮೇಲೆ ನಿಗಾ ಇಡಬೇಕಿತ್ತು. ಆದರೆ ಅಲ್ಲಿನ ಸರ್ಕಾರ ಸುಮ್ಮನೆ ಕುಳಿತುಕೊಂಡಿತ್ತು ಎಂದಿದ್ದಾರೆ.
ದೆಹಲಿಯಲ್ಲಿ ನಿನ್ನೆ ನಡೆದ ಹಿಂಸಾಚಾರವನ್ನ ಖಂಡಿಸಲಾಗುತ್ತದೆ ಎಂದಿರುವ ಕೇಂದ್ರ ಸಚಿವರು, ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಅವಮಾನಿಸಿದ ರೀತಿಯನ್ನ ಎಂದಿಗೂ ಭಾರತ ಸಹಿಸುವುದಿಲ್ಲ ಎಂದರು. ಚುನಾವಣೆಗಳಲ್ಲಿ ಸೋಲು ಕಾಣುತ್ತಿರುವ ಕಾರಣ ಕಾಂಗ್ರೆಸ್ ಹತಾಶೆಗೊಂಡಿದ್ದು, ದೇಶದಲ್ಲಿ ಗೊಂದಲವನ್ನುಂಟು ಮಾಡಲು ಬಯಸುತ್ತಿದೆ ಎಂದು ತಿಳಿಸಿದ್ದಾರೆ.