ನವದೆಹಲಿ: ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಕಾಶ್ಮೀರಕ್ಕೆ ಇಂದು ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಇದಕ್ಕಾಗಿ ಅವರು ನವದೆಹಲಿಯಿಂದ ಶ್ರೀನಗರಕ್ಕೆ ವಿಮಾನದಲ್ಲಿ ತೆರಳಿದ್ದರು.
ಇನ್ನು ಪ್ರತಿಪಕ್ಷ ನಾಯಕರಾದ ಡಿ. ರಾಜಾ, ಶರದ್ ಯಾದವ್, ಮಜೀನ್ ಮೆನನ್ ಮತ್ತು ಮನೋಜ್ ಜಾ ಸಹ ದೆಹಲಿಯಿಂದ ಶ್ರೀನಗರಕ್ಕೆ ತೆರಳಿದ್ದಾರೆ. ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್ 370 ವಿಶೇಷ ಸ್ಥಾನವನ್ನ ಹಿಂಪಡೆದ ಬಳಿಕ, ಕೇಂದ್ರ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಭಾರಿ ಮಾತಿನ ಚಕಮಕಿ ನಡೆದಿತ್ತು.
ಕಣಿವೆ ಕೇಂದ್ರಾಡಳಿತ ಪ್ರದೇಶದಲ್ಲಿ ಕರ್ಪ್ಯೂ ಹೇರಿದ್ದಕ್ಕೆ, ಜನಜೀವನಕ್ಕೆ ತೊಂದರೆ ಆಗುತ್ತಿರುವುದರ ಬಗ್ಗೆ ರಾಹುಲ್ ಗಾಂಧಿ ಹಾಗೂ ಇತರ ಪ್ರತಿಪಕ್ಷಗಳ ನಾಯಕರು ಟೀಕಾಪ್ರಹಾರ ನಡೆಸಿದ್ದರು.
ಅಷ್ಟೇ ಅಲ್ಲ ರಾಹುಲ್ ಗಾಂಧಿ ಹಾಗೂ ರಾಜ್ಯಪಾಲರ ನಡುವೆ ಟ್ವೀಟ್ ವಾರ್ ಕೂಡಾ ನಡೆದಿತ್ತು. ಟ್ವೀಟ್ನಲ್ಲಿ ಟೀಕೆ ನಡೆಸುವುದನ್ನು ಬಿಟ್ಟು ಕಾಶ್ಮೀರಕ್ಕೆ ಬಂದು ವಾಸ್ತವ ತಿಳಿದುಕೊಳ್ಳುವಂತೆ ರಾಜ್ಯಪಾಲ ಮಲ್ಲಿಕ್ ರಾಹುಲ್ ಗಾಂಧಿ ಅವರಿಗೆ ಟಾಂಗ್ ಕೊಟ್ಟಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ರಾಹುಲ್ ಗಾಂಧಿ ಕಾಶ್ಮೀರಕ್ಕೆ ಬರಲು ವಿಶೇಷ ವಿಮಾನದ ವ್ಯವಸ್ಥೆಯೇನೂ ಬೇಡ, ರಾಜ್ಯದಲ್ಲಿ ವಾಸ್ತವ ಅರಿಯಲು ಮುಕ್ತ ತಿರುಗಾಟಕ್ಕೆ ಅವಕಾಶ ನೀಡುವಂತೆ ತಿರುಗೇಟು ನೀಡಿದ್ದರು.