ಅಹಮದಾಬಾದ್:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಅಹಮದಾಬಾದ್ ಮೆಟ್ರೋಪಾಲಿಟನ್ ಕೋರ್ಟ್ ಜಾಮೀನು ನೀಡಿದೆ.
ಎಡಿಸಿ ಬ್ಯಾಂಕ್ ವಿರುದ್ಧ ಸುಳ್ಳು ಆಪಾದನೆ ಮಾಡಿದ್ದಾರೆ ಎನ್ನುವ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು ಈ ಸಂಬಂಧ ರಾಗಾ ವಿಚಾರಣೆಗೆ ಹಾಜರಾಗಿದ್ದಾರೆ.
ಏನಿದು ಪ್ರಕರಣ?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಅಹಮದಾಬಾದ್‌ನಲ್ಲಿರುವ ಎಡಿಸಿ ಬ್ಯಾಂಕ್ ನಿರ್ದೇಶಕರಾಗಿದ್ದಾಗ ಅಪಾರ ಪ್ರಮಾಣದ 500 ಮತ್ತು 1000 ರೂಪಾಯಿಯ ಹರಿದ ನೋಟುಗಳನ್ನು ಠೇವಣಿ ಮಾಡಲಾಗಿತ್ತು ಎಂದು ರಾಹುಲ್ ಗಾಂಧಿ ವಿವಾದಿತ ಹೇಳಿಕೆ ನೀಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಬರೆದುಕೊಂಡಿದ್ದರು.
ರಾಹುಲ್ ಗಾಂಧಿ ಹೇಳಿಕೆಯ ವಿರುದ್ಧ ಎಡಿಸಿ ಬ್ಯಾಂಕ್ ಶಾಖೆಯ ಮುಖ್ಯಸ್ಥ ಅಜಯ್ ಪಟೇಲ್ ಇಲ್ಲಿನ ಮೆಟ್ರೋಪಾಲಿಟನ್ ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದರು.
ಈ ದೂರಿನ ಜೊತೆಗೆ ಗುಜರಾತ್ನ ಇನ್ನೆರಡು ಕೋರ್ಟ್ನಲ್ಲಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆಗಳು ದಾಖಲಾಗಿವೆ. ಚುನಾವಣಾ ಪ್ರಚಾರದಲ್ಲಿ ರಾಹುಲ್ ಹೇಳಿಕೆಯನ್ನು ಆಧರಿಸಿ ಈ ದೂರುಗಳು ದಾಖಲಾಗಿವೆ.