ಭುವನೇಶ್ವರ (ಒಡಿಶಾ):ಭಾರತದಲ್ಲಿ ತಯಾರಾಗುತ್ತಿರುವ ಕೋವಿಡ್-19 ಲಸಿಕೆ 'ಕೊವಾಕ್ಸಿನ್'ನ ಎರಡನೇ ಹಂತದ ಮಾನವ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಲು ಇಲ್ಲಿನ ಆಸ್ಪತ್ರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಎರಡನೇ ಹಂತದ ಪ್ರಯೋಗವನ್ನು ಶೀಘ್ರದಲ್ಲೇ ಪ್ರಾರಂಭಿಸಲು ಯೋಜಿಸುತ್ತಿರುವುದರಿಂದ ಮೇಲ್ವಿಚಾರಣೆಯ ತಪಾಸಣಾ ಹಂತ 1 ಇನ್ನೂ ಮುಂದುವರೆದಿದೆ" ಎಂದು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಎಸ್‌ಯುಎಂ ಆಸ್ಪತ್ರೆಯ ವೈದ್ಯಕೀಯ ವಿಜ್ಞಾನ ವಿಭಾಗದ ಪ್ರಧಾನ ತನಿಖಾಧಿಕಾರಿ ಡಾ. ಇ.ವೆಂಕಟ ರಾವ್ ಹೇಳಿದ್ದಾರೆ.
ಲಸಿಕೆ ಎಷ್ಟು ಪರಿಣಾಮಕಾರಿಗಿದೆ ಎಂದು ಸ್ವಯಂಸೇವಕರಿಂದ ಸಂಗ್ರಹಿಸಲಾದ ರಕ್ತದ ಮಾದರಿಗಳಿಂದ ತಿಳಿಯಲಾಗುವುದು. ಅಷ್ಟೇ ಅಲ್ಲದೆ ಈ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂದು ಡಾ. ರಾವ್ ಹೇಳಿದ್ದಾರೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಲಸಿಕೆಯ ಮಾನವ ಪ್ರಯೋಗವನ್ನು ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಆಯ್ಕೆ ಮಾಡಿದ ದೇಶದ 12 ವೈದ್ಯಕೀಯ ಕೇಂದ್ರಗಳಲ್ಲಿ ಐಎಂಎಸ್ ಮತ್ತು ಎಸ್‌ಯುಎಂ ಆಸ್ಪತ್ರೆ ಕೂಡ ಒಂದು.
"ವ್ಯಾಕ್ಸಿನೇಷನ್ಗೆ ಮೂರರಿಂದ ಏಳು ದಿನಗಳ ಮೊದಲು ನಡೆಸಿದ ಸ್ಕ್ರೀನಿಂಗ್ ಪ್ರಕ್ರಿಯೆಯ ಮೂಲಕ ಆಯ್ಕೆಯಾದ ನಂತರ ಪ್ರತೀ ಸ್ವಯಂಸೇವಕರಿಗೆ ಎರಡು ಡೋಸ್ ಲಸಿಕೆ ನೀಡಲಾಯಿತು. ರಕ್ತದ ಮಾದರಿಯನ್ನು ಸಂಗ್ರಹಿಸುವಾಗ ಪ್ರಥಮ ಡೋಸ್ಅನ್ನು ಮೊದಲ ದಿನ ನೀಡಲಾಯಿತು. ಎರಡನೇ ಡೋಸ್ಅನ್ನು 14ನೇ ದಿನದಂದು ನೀಡಲಾಯಿತು. ಬಳಿಕ ರಕ್ತದ ಮಾದರಿಯನ್ನು ಸಹ ಸಂಗ್ರಹಿಸಲಾಗಿದೆ "ಎಂದು ಡಾ. ರಾವ್ ಹೇಳಿದರು.
ನಂತರದ ದಿನಗಳಲ್ಲಿ ರಕ್ಷಣೆಯ ಅವಧಿಯನ್ನು ಅಂದಾಜು ಮಾಡಲು ಸ್ವಯಂಸೇವಕರ ರಕ್ತದ ಮಾದರಿಗಳನ್ನು ವಿವಿಧ ದಿನಗಳಲ್ಲಿ (28, 42, 104, 194 ದಿನ) ಸಂಗ್ರಹಿಸಲಾಗುವುದು ಎಂದು ಅವರು ಹೇಳಿದರು. ಇನ್ನು ಎರಡನೇ ಹಂತದ ಪ್ರಯೋಗಕ್ಕೆ ಭಾಗಿಯಾಗಲು ಸ್ವಯಂಸೇವಕರು ಉತ್ಸುಕರಾಗಿದ್ದಾರೆ ಎಂದರು.
ಈ ಪ್ರಯೋಗದ ಭಾಗವಾಗಲು ಬಯಸುವವರು http://ptctu.soa.ac.inನಲ್ಲಿ ಸಂಪರ್ಕಿಸಬಹುದು ಎಂದಿದ್ದಾರೆ.