ಚೆನ್ನೈ: ಭಾರತ ಮತ್ತು ಚೀನಾ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆ ಮುಕ್ತಾಯವಾಗಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಬೆಳಗ್ಗೆ ನಿಯೋಗಮಟ್ಟದ ಸಭೆ ನಡೆಸಿದ್ದ ಕ್ಸಿ ಜಿನ್ಪಿಂಗ್ ಮತ್ತು ಪ್ರಧಾನಿ ಮೋದಿ, ಉಭಯ ರಾಷ್ಟಗಳ ಪರಸ್ಪರ ವ್ಯಾಪಾರ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದ್ದರು. ಅಲ್ಲದೇ ತಮ್ಮ ಭೇಟಿ ವೇಳೆ, ಭಾರತ ತೋರಿದ ಆತಿಥ್ಯವನ್ನ ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಕ್ಸಿ ಹರ್ಷ ವ್ಯಕ್ತಪಡಿಸಿದ್ದರು.
2 ದಿನಗಳ ಅನೌಪಚಾರಿಕ ಶೃಂಗಸಭೆ ಮುಕ್ತಾಯವಾದ ಬೆನ್ನಲ್ಲೆ ಕ್ಸಿ ಜಿನ್ಪಿಂಗ್ ಚೆನ್ನೈನ ವಿಮಾನ ನಿಲ್ದಾಣದಿಂದ ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇತ್ತ ಪ್ರಧಾನಿ ಮೋದಿ ಕೂಡ ಚೆನ್ನೈನ ವಿಮಾನ ನಿಲ್ದಾಣದಿಂದ ನವದೆಹಲಿಗೆ ತೆರಳಿದ್ದಾರೆ.
ಇನ್ನು ಉಭಯ ನಾಯಕರ ಭೇಟಿ ವೇಳೆ ಕಾಶ್ಮೀರದ ವಿಚಾರ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದ್ರೆ ಕಾಶ್ಮೀರ ಭಾರತದ ಆಂತರಿಕ ವಿಚಾರ, ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದಾರೆ. ಅಲ್ಲದೆ ಮುಂದಿನ ಶೃಂಗಸಭೆಗೆ ಚೀನಾಕ್ಕೆ ಬರುವಂತೆ ಮೋದಿಯನ್ನ ಆಹ್ವಾನಿಸಿದ್ದಾರೆ. ಮೋದಿ ಕೂಡ ಇದಕ್ಕೆ ಸಮ್ಮತಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.