ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ 370ನೇ ವಿಧಿ ರದ್ದುಪಡಿಸಿದ ನಂತರ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್) ಭಯೋತ್ಪಾದಕರ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂದು ಭಾರತೀಯ ಗುಪ್ತಚರ ಇಲಾಖೆ (ಐಬಿ) ದೆಹಲಿ ಪೊಲೀಸರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಜೈಶ್-ಎ-ಮೊಹಮ್ಮದ್ (ಜೆಎಂ) ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬಹಿರಂಗಗೊಂಡಾಗ, ಅಲ್- ಉಮರ್- ಮುಜಾಹಿದ್ದೀನ್ (ಎಯುಎಂ), ಪಾಕ್ನ ಆಂತರಿಕ ಪತ್ತೇದಾರಿ ಸಂಸ್ಥೆ ಐಎಸ್‌ಐ ಒಗ್ಗೂಡಿ ಕಣಿವೆ ರಾಜ್ಯದ ಹೊರಗೆ ದೊಡ್ಡ ಮಟ್ಟದ ಭಯೋತ್ಪಾದಕ ದಾಳಿಗಳನ್ನು ನಡೆಸುವ ಹುನ್ನಾರ ನಡೆಸಿವೆ ಎಂದು ಗುಪ್ತಚರ ಅಧಿಕಾರಿಗಳ ವರದಿಯಲ್ಲಿ ಹೇಳಲಾಗಿದೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಎಯುಎಂ ಕಾಶ್ಮೀರಿದ ಉಗ್ರ ಮುಷ್ತಾಕ್ ಅಹ್ಮದ್ ಜರ್ಗರ್ ಅಲಿಯಾಸ್ ಮುಷ್ತಾಕ್ ಲಾತ್ರಮ್ ನೇತೃತ್ವದಲ್ಲಿ ವಿಧ್ವಂಸಕ ಕೃತ್ಯಗಳ ಎಸಗಲು ಹುನ್ನಾರ ನಡೆಸಿದೆ. ಕಳೆದ ಜೂನ್ 12ರಂದು ಶ್ರೀನಗರ ಸಮೀಪ ಅನಂತ್ನಾಗ್ನಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಿತು, ಐದು ಜನ ಸಿಆರ್ಪಿಎಫ್ ಯೋಧರನ್ನು ಈತ ಹತ್ಯೆ ಮಾಡಿದ್ದ.
ಜರ್ಗರ್ ತನ್ನ ಕೃತ್ಯಕ್ಕೆ ಜಮ್ಮು- ಕಾಶ್ಮೀರ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ (ಪಿಒಕೆ) ಅನುಯಾಯಿಗಳನ್ನು ನೇಮಕ ಮಾಡಿಕೊಂಡಿದ್ದಾನೆ. 370ನೇ ವಿಧಿ ರದ್ದುಪಡಿಸಿದ ನಂತರ, ಜರ್ಗರ್ ಮತ್ತು ಅವನ ಹಿಂಬಾಲಕರನ್ನು ಬಳಸಿಕೊಂಡು ಭಾರತದೊಳಗೆ ಸರಣಿ ಸ್ಫೋಟ ನಡೆಸುವುದು ಐಎಸ್ಐನ ಉದ್ದೇಶವಾಗಿದೆ ಎಂದು ಐಬಿ ತಿಳಿಸಿದೆ.