ಗುವಾಹಟಿ: ಭೀಕರ ಪ್ರವಾಹಕ್ಕೆ ತುತ್ತಾಗಿರುವ ಅಸ್ಸೋಂನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಎಂಟು ಜಿಲ್ಲೆಗಳಲ್ಲಿ 2.83 ಲಕ್ಷ ಜನರು ಈಗಲೂ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 2,08,481 ಜನರು ಕೇಂದ್ರ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿದ್ದಾರೆ. ಅಲ್ಲಿ 117 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದು ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹ ಪೀಡಿತ ಎಂಟು ಜಿಲ್ಲೆಗಳಲ್ಲಿ ಸುಮಾರು 26,652 ಹೆಕ್ಟೇರ್ ಬೆಳೆ ನಾಶವಾಗಿದ್ದು, 432 ಹಳ್ಳಿಗಳು ಜಲಾವೃತವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರವಾಹದಿಂದಾಗಿ ಸಾಕು ಪ್ರಾಣಿಗಳು ಮತ್ತು ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಲ್ಲಿನ ಖಡ್ಗಮೃಗಗಳು ಸೇರಿದಂತೆ ಸುಮಾರು 45,000 ಪ್ರಾಣಿಗಳು ಸಂಕಷ್ಟದಲ್ಲಿವೆ. ಅನೇಕ ರಸ್ತೆಗಳು, ಸೇತುವೆಗಳು, ಒಡ್ಡುಗಳು, ಸರ್ಕಾರಿ ಕಟ್ಟಡಗಳು ಮತ್ತು ಶಾಲೆಗಳು ಹಾನಿಗೊಳಗಾಗಿವೆ ಎಂದಿದ್ದಾರೆ.
ಜೋರ್ಹತ್, ಧುಬ್ರಿ ಮತ್ತು ಸೋನಿತ್‌ಪುರ ಜಿಲ್ಲೆಗಳ ನೀಮತಿಘಾಟ್‌ನಲ್ಲಿ ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೆ, ಅದರ ಉಪ ನದಿಗಳಾದ ಜಿಯಾ ಭಾರಲಿ ಮತ್ತು ಕೋಪಿಲಿ ಕ್ರಮವಾಗಿ ಸೋನಿತ್‌ಪುರ ಮತ್ತು ನಾಗಾಂ ಜಿಲ್ಲೆಗಳಲ್ಲಿ ಅಪಾಯದ ಮಟ್ಟ ಉಕ್ಕಿ ಹರಿಯುತ್ತಿವೆ.