ಬಿರ್ಭಮ್(ಪಶ್ಚಿಮ ಬಂಗಾಳ):ಮಾನಸಿಕ ಅಸ್ವಸ್ಥೆವೋರ್ವಳ ದೇಹ ಸೇರಿದ್ದ ಒಂದೂವರೆ ಕಿಲೋ ಆಭರಣ ಹಾಗೂ ಹತ್ತಾರು ನಾಣ್ಯಗಳನ್ನು ಶಸ್ತ್ರಚಿಕಿತ್ಸೆ ಮೂಲಕಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರೇ ಹೌಹಾರಿದ್ದರು. ಮಹಿಳೆಯ ದೇಹದಲ್ಲಿ ಐದು ಹಾಗೂ ಹತ್ತು ರೂ. ಮೌಲ್ಯದ ಬರೋಬ್ಬರಿ 90 ನಾಣ್ಯಗಳಿದ್ದವು.
ಆಪರೇಷನ್ ಮೂಲಕ ನಾಣ್ಯದ ಹೊರತಾಗಿ ಚೈನ್, ಮೂಗುತಿ, ಕಿವಿಯೋಲೆ, ಬಳೆ ಸೇರಿದಂತೆ ಒಂದೂವರೆ ಕೆಜಿ ಆಭರಣವನ್ನು ಮಹಿಳೆಯ ಹೊಟ್ಟೆಯಿಂದ ಹೊರತೆಗೆಯಲಾಗಿದೆ.
ಮಹಿಳೆಯ ಹೊಟ್ಟೆಯಲ್ಲಿ ಆಭರಣಗಳು ಬಹುತೇಕ ಆಭರಣಗಳು ತಾಮ್ರ ಮತ್ತು ಹಿತ್ತಾಳೆಯಿಂದ ಮಾಡಲ್ಪಟ್ಟಿದ್ದರೆ ಒಂದಷ್ಟು ಚಿನ್ನದ ಆಭರಣಗಳೂ ಸೇರಿವೆ ಎಂದು ಆಪರೇಷನ್ ನಡೆಸಿದ ಡಾಕ್ಟರ್ ಬಿಸ್ವಾಸ್ ಹೇಳಿದ್ದಾರೆ.
ಮನೆಯಲ್ಲಿನ ಪ್ರತಿನಿತ್ಯ ಆಭರಣಗಳು ಸದ್ದಿಲ್ಲದೆ ನಾಪತ್ತೆಯಾಗುತ್ತಿರುವುದು ಆಕೆಯ ತಾಯಿಯ ಅರಿವಿಗೆ ಬಂದಿತ್ತು. ತಾಯಿಯ ಹೇಳಿಕೆಯಂತೆ ನಾಣ್ಯಗಳನ್ನು ಈ ಮಹಿಳೆ ತನ್ನ ಸೋದರಮಾವನ ಅಂಗಡಿಯಿಂದ ತೆಗೆದುಕೊಂಡಿದ್ದಳಂತೆ. ಇನ್ನುಆಭರಣಗಳ ಬಗ್ಗೆ ಆಕೆಯ ಬಳಿ ಕೇಳಿದಾಗ ಅಳುತ್ತಿದ್ದಳಂತೆ. ನಂತರ ಆಕೆಯ ಚಟುವಟಿಕೆಯ ಮೇಲೆ ತೀವ್ರ ನಿಗಾ ವಹಿಸಿದಾಗ ಆಭರಣಗಳನ್ನು ತಿನ್ನುತ್ತಿದ್ದಿದ್ದು ಗಮನಕ್ಕೆ ಬಂದಿತ್ತು.
ಹೀಗಾಗಿ ಕಳೆದೆರಡು ತಿಂಗಳಿನಿಂದ ಆಕೆಯ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಮಹಿಳೆಯ ತಾಯಿ ಮಾಹಿತಿ ನೀಡಿದ್ದಾರೆ.