ನವದೆಹಲಿ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಅತೀ ಕಡಿಮೆಯಿದೆ. ಹಾಗೆಯೇ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಪಡೆಯಲ್ಲೂ ಅವರ ಸಂಖ್ಯೆ ಕೇವಲ ಶೇ 15ರಷ್ಟಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳವಳ ವ್ಯಕ್ತಪಡಿಸಿದರು.
ರಾಷ್ಟ್ರೀಯ ವಿಜ್ಞಾನ ದಿನ ಉದ್ದೇಶಿಸಿ ಇಂದು ಮಾತನಾಡಿದ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿರುವ ಮಹಿಳೆಯರ ಸಾಧನೆಯ ಬಗ್ಗೆ ಉಲ್ಲೇಖಿಸಿದರು. ಜೊತೆಗೆ ಈ ಕ್ಷೇತ್ರಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇರುವ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಹಾಗಾಗಿ ಈ ಬಗಗೆ ಸುಧಾರಣೆಯ ಅಗತ್ಯತೆಯ ಬಗ್ಗೆ ಅವರು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.
ಕೆಲ ಸಾಧಕ ಮಹಿಳಾ ವಿಜ್ಞಾನಿಗಳ ಉಪಸ್ಥಿತಿಯ ಹೊರತಾಗಿಯೂ ಭಾರತ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಪಡೆಯಲ್ಲಿ ಕೇವಲ ಶೇ 15ರಷ್ಟು ಮಾತ್ರ ಮಹಿಳೆಯರಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಹಿಳೆಯರ ಸಂಖ್ಯೆ ಶೇ 30 ಪ್ರತಿಶತಕ್ಕಿಂತಲೂ ಕಡಿಮೆ ಎನಿಸಿದೆ ಎಂದು ಕೋವಿಂದ್ ಅಭಿಪ್ರಾಯಪಟ್ಟರು.
ವಿಜ್ಞಾನ ಮತ್ತು ತಂತ್ರಜ್ಞಾನ ಬೋಧನಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರ ಸಂಖ್ಯೆಯಲ್ಲೂ ಹೆಚ್ಚಿನ ವ್ಯತ್ಯಾಸವೇನಿಲ್ಲ. ಇದಕ್ಕೆ ಮುಖ್ಯ ಕಾರಣ ಮಹಿಳೆಯರು ವಿಜ್ಞಾನ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆಯದೇ ಇರುವುದು. ಕೆಲವೇ ಕೆಲವರು ಮಾತ್ರ ಈ ಕ್ಷೇತ್ರದಲ್ಲಿ ಮುಂದುವರೆದು ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎಂದ ಅವರು, ಮಂಗಳಯಾನ ಯೋಜನೆಯಲ್ಲಿ ಮಹಿಳಾ ವಿಜ್ಞಾನಿಗಳ ನಿರ್ಣಾಯಕ ಪಾತ್ರವನ್ನು ಸ್ಮರಿಸಿದರು. ಹೆಣ್ಣು ಮಕ್ಕಳಿಗೆ ವಿಜ್ಞಾನ ವಿಭಾಗದಲ್ಲಿ ಉನ್ನತ ಶಿಕ್ಷಣ ದೊರೆಯುವಂತೆ ಮಾಡಿದರೆ ಇಂತಹ ಸಾಧನೆಗಳು ಇನ್ನೂ ಹೆಚ್ಚುತ್ತವೆ ಎಂದು ಸಲಹೆ ನೀಡಿದರು.
ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊತ್ತಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಿ. ವಿ. ರಾಮನ್ ಅವರ ಅಪೂರ್ವ ಸಾಧನೆಯ ನೆನಪಿನಲ್ಲಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಆಚರಿಸಲಾಗುತ್ತದೆ.