ಮಯೂರ್ಭಂಜ್ (ಒಡಿಶಾ):ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಬಂಗಿರಿಪೋಶಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿರುವ ಸತಭಯಾ ಗ್ರಾಮದಲ್ಲಿ ಮಹಿಳೆಯೊಬ್ಬಳನ್ನು ಆಕೆಯ ಇಬ್ಬರು ಗಂಡು ಮಕ್ಕಳು ಥಳಿಸಿದ ಪರಿಣಾಮವಾಗಿ ಆಕೆ ಮೃತಪಟ್ಟ ಘಟನೆ ನಡೆದಿದೆ.
ಕುಡಿದ ನಶೆಯಲ್ಲಿ ತಾಯಿಯನ್ನೇ ಹೊಡೆದು ಕೊಂದ ಮಕ್ಕಳು! - ಒಡಿಶಾದ ಮಯೂರ್ಭಂಜ್ ಜಿಲ್ಲೆ
ಯುವಕರಿಬ್ಬರು ಕುಡಿದ ಅಮಲಿನಲ್ಲಿ ತಾಯಿಯೊಂದಿಗೆ ಜಗಳವಾಡಿ, ಆಕೆಯನ್ನು ಹೊಡೆದು ಕೊಂದಿರುವ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಸತಭಯಾ ಗ್ರಾಮದಲ್ಲಿ ನಡೆದಿದೆ.
ಮೃತಳನ್ನು ತುಳಸಿ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಆಕೆಯ ಪುತ್ರರಾದ ರಬಿ ಮತ್ತು ರಾಜ್ ಕಿಶೋರ್ ಎಂದು ಗುರುತಿಸಲಾಗಿದೆ. ಪುತ್ರರಿಬ್ಬರು ಸಂಜೆ ಮನೆಗೆ ಮರಳಿದ ಸಂದರ್ಭದಲ್ಲಿ ತಾಯಿಯೊಂದಿಗೆ ವಾಗ್ವಾದ ನಡೆದಿದೆ. ಕುಡಿದ ಮತ್ತಿನಲ್ಲಿ ಯುವಕರು ತಾಯಿಗೆ ದೊಣ್ಣೆಯಿಂದ ಹೊಡೆಯಲಾರಂಭಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ತುಳಸಿ ರಾತ್ರಿಯಿಡೀ ನೋವಿನಿಂದ ನರಳಾಡಿ ಬೆಳಗ್ಗೆ ಮೃತಪಟ್ಟಿದ್ದಾರೆ.
ಮಾಹಿತಿ ತಿಳಿದ ಬಂಗಿರಿಪೋಶಿ ಪೊಲೀಸರು ಸ್ಥಳಕ್ಕೆ ತೆರಳಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ.