ಭಾರತದಲ್ಲಿ ಮಹಿಳೆಯರ ವಿವಾಹದ ಕಾನೂನುಬದ್ಧ ವಯಸ್ಸನ್ನು 18 ರಿಂದ 24 ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದೆ. ಇದಕ್ಕಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದ್ದು, ಇದೇ ಜುಲೈ 31 ರೊಳಗೆ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾನೂನು ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಉನ್ನತ ಮಟ್ಟದ ಸಮಿತಿಯಲ್ಲಿದ್ದಾರೆ. ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ಸಮಿತಿಯ ಅಧ್ಯಕ್ಷರಾಗಿದ್ದು, ನೀತಿ ಆಯೋಗದ ವಿಕೆ ಪೌಲ್ ಕೂಡ ಸಮಿತಿಯಲ್ಲಿದ್ದಾರೆ.
ತಾಯಿಯಾಗುವ ಪ್ರಾಪ್ತ ವಯಸ್ಸು, ಶಿಶು ಮರಣ ಪ್ರಮಾಣದ ಕಾರಣಗಳು, ಪೌಷ್ಟಿಕಾಂಶ ಮಟ್ಟದಲ್ಲಿ ಸುಧಾರಣೆ ಹಾಗೂ ಇನ್ನಿತರ ವಿಷಯಗಳ ಕುರಿತಾಗಿ ಅಧ್ಯಯನ ನಡೆಸಲಿರುವ ಸಮಿತಿಯು ಕೇಂದ್ರಕ್ಕೆ ಸಮಗ್ರ ವರದಿ ನೀಡಲಿದೆ.
ಮಹಿಳೆಯರ ವಿವಾಹದ ಕಾನೂನುಬದ್ಧ ವಯಸ್ಸು; ಕಾನೂನಿನ ಇತಿಹಾಸ
ಅಪ್ರಾಪ್ತರ ಮೇಲಿನ ದೌರ್ಜನ್ಯ ತಡೆಯಲು ಹಾಗೂ ಬಾಲ್ಯ ವಿವಾಹ ತಡೆಗಟ್ಟಲು ವಿವಾಹದ ಕಾನೂನು ಬದ್ಧ ವಯಸ್ಸನ್ನು ಕಡ್ಡಾಯಗೊಳಿಸಲಾಗಿದೆ. 10 ವರ್ಷಕ್ಕೂ ಕೆಳಗಿನ ಬಾಲಕಿಯ ಜೊತೆಗಿನ ಲೈಂಗಿಕ ಕ್ರಿಯೆಯನ್ನು ಅಪರಾಧ ಎಂದು 1860 ರಲ್ಲೇ ಕಾನೂನು ಮಾಡಲಾಗಿತ್ತು. 1927 ರ ಏಜ್ ಆಫ್ ಕನ್ಸೆಂಟ್ ಬಿಲ್ ಪ್ರಕಾರ 12 ವರ್ಷಕ್ಕೂ ಕಡಿಮೆ ವಯಸ್ಸಿನ ಬಾಲಕಿಯರ ವಿವಾಹವನ್ನು ನಿರ್ಬಂಧಿಸಲಾಗಿತ್ತು.
1929 ರ ಶಾರದಾ ಕಾನೂನು
1929 ರಲ್ಲಿ ವಿವಾಹದ ಕಾನೂನು ಬದ್ಧ ವಯಸ್ಸನ್ನು ಪುರುಷರಿಗೆ ಕನಿಷ್ಠ 18 ವರ್ಷ ಹಾಗೂ ಮಹಿಳೆಯರಿಗೆ ಕನಿಷ್ಠ 14 ವರ್ಷಕ್ಕೆ ಹೆಚ್ಚಿಸಿ ಹೊಸ ವಿವಾಹ ಕಾನೂನು ಜಾರಿಗೆ ತರಲಾಯಿತು. ಆಗಿನ ಕಾಲದ ಆರ್ಯ ಸಮಾಜದ ಮುಖಂಡ ಹಾಗೂ ನ್ಯಾಯಮೂರ್ತಿ ಹರ್ಬಿಲಾಸ ಶಾರದಾ ಅವರ ಹೆಸರನ್ನು ಈ ಕಾಯ್ದೆಗೆ ಇಡಲಾಗಿತ್ತು. ವಿವಾಹದ ಕಾನೂನು ಬದ್ಧ ವಯಸ್ಸು ಕಾಯ್ದೆಯ ಜಾರಿಯು ಮಹಿಳೆಯರ ಸಂಘಟನಾ ಶಕ್ತಿಯ ಪ್ರಯತ್ನದಿಂದ ರೂಪುಗೊಂಡ ಮೊದಲ ಕಾಯ್ದೆ ಎಂದು ಪ್ರಸಿದ್ಧವಾಗಿದೆ.
ಆದರೆ ಈ ಕಾನೂನು ವಾಸ್ತವದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಲೇ ಇಲ್ಲ. ಹಿಂದೂ ಹಾಗೂ ಮುಸಲ್ಮಾನ ಸಮುದಾಯದ ಸಂಪ್ರದಾಯವಾದಿ ಜನರನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ ಎಂಬ ಭಯದಿಂದ ಬ್ರಿಟಿಷ್ ಸರ್ಕಾರ ಕಾಯ್ದೆಯ ಪರಿಣಾಮಕಾರಿ ಜಾರಿಗೆ ಆಸಕ್ತಿ ವಹಿಸಲಿಲ್ಲ.