ನವದೆಹಲಿ:ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ದೇವ್ ಅವರ 551ನೇ ಜನ್ಮ ದಿನಾಚರಣೆ ಹಿನ್ನೆಲೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ಶುಭಕೋರಿದ್ದಾರೆ.
"ಎಲ್ಲರಿಗೂ, ವಿಶೇಷವಾಗಿ ಭಾರತ ಮತ್ತು ವಿದೇಶದಲ್ಲಿರುವ ನಮ್ಮ ಸಿಖ್ ಸಹೋದರ ಸಹೋದರಿಯರಿಗೆ ಗುರುನಾನಕ್ ಜಯಂತಿಯ ಶುಭಾಶಯಗಳು. ಗುರುನಾನಕ್ ದೇವ್ ಅವರು ಜನರಿಗೆ ಏಕತೆ, ಸಾಮರಸ್ಯ, ಭ್ರಾತೃತ್ವ, ಸೌಹಾರ್ದತೆ ಮತ್ತು ಸೇವೆಯ ಹಾದಿ ತೋರಿಸಿದ್ದಾರೆ. ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಸ್ವಾಭಿಮಾನದ ಆಧಾರದ ಮೇಲೆ ಜೀವನಶೈಲಿಯನ್ನು ಸಾಕಾರಗೊಳಿಸಲು ಆರ್ಥಿಕ ತತ್ವಶಾಸ್ತ್ರವನ್ನು ನೀಡಿದ್ದಾರೆ. ಅವರ ಜೀವನ ಮತ್ತು ಬೋಧನೆಗಳು ಮಾನವಕುಲಕ್ಕೆ ಸ್ಫೂರ್ತಿ" ಎಂದು ರಾಮ್ ನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ನಿನ್ನೆ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನಲ್ಲಿ ಮುಂಚಿತವಾಗಿಯೇ ಗುರುನಾನಕ್ ಜಯಂತಿ ಶುಭಾಶಯ ಕೋರಿದ್ದ ಪಿಎಂ ಮೋದಿ, "ಗುರುನಾನಕ್ ದೇವ್ ಜೀ ಅವರ ಆಲೋಚನೆಗಳು ಸಮಾಜಕ್ಕೆ ಸೇವೆ ಸಲ್ಲಿಸಲು ಜನರನ್ನು ಪ್ರೇರೇಪಿಸುತ್ತಿವೆ" ಎಂದು ಇಂದು ಟ್ವೀಟ್ ಮಾಡಿದ್ದಾರೆ.
"ಗುರುನಾನಕ್ ದೇವ್ ಜೀ ನನಗೆ ಅಹಂನಿಂದ ದೂರ ಉಳಿಯುವ, ಸತ್ಯ ಮತ್ತು ಭ್ರಾತೃತ್ವವನ್ನು ಕಲಿಸಿದ್ದಾರೆ. ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ. ನಿಮ್ಮೆಲ್ಲರಿಗೂ ಗುರುನಾನಕ್ ಜಯಂತಿಯ ಶುಭಾಶಯಗಳು" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಸಿಖ್ ಧರ್ಮದಲ್ಲಿ ಅತ್ಯಂತ ಪವಿತ್ರ ಹಬ್ಬವೆಂದು ಪರಿಗಣಿಸಲಾಗಿರುವ ಗುರುನಾನಕ್ ಜಯಂತಿಯನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಕಾರ್ತಿಕ ತಿಂಗಳ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಇದನ್ನು ಕಾರ್ತಿಕ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ.