ನಾವು ರೂಢಿಯಂತೆ ಕೈ ತೊಳೆಯುತ್ತಾ ಇದ್ದೇವೆ. ಸೀನನ್ನು ನಿಯಂತ್ರಿಸುವುದು ಹೇಗೆ ಎಂದು ಅಭ್ಯಾಸ ಮಾಡುತ್ತ ಇದ್ದೇವೆ. ನಮ್ಮ ಮುಖಗಳನ್ನು ಮುಟ್ಟಿಕೊಳ್ಳುತ್ತಿಲ್ಲ. ಮುಖಗವಸುಗಳನ್ನು ಧರಿಸಿದ್ದೇವೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಒಂದಲ್ಲ ಎರಡಲ್ಲ, ಕೋವಿಡ್- 19ನಿಂದ ಸುರಕ್ಷಿತವಾಗಿ ಇರಲು ನೂರಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಆದರೆ ಇದಕ್ಕಿಂತ ಮುಖ್ಯವಾದದ್ದು ಒಂದು ಇದೆ, ಅದು ನಮ್ಮ ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದು. ಸಾಂಕ್ರಾಮಿಕ ಪಿಡುಗು, ಜೀವ ಮತ್ತು ಜೀವನ ಎರಡನ್ನೂ ನಾಶಪಡಿಸುತ್ತಿರುವ ಸಮಯದಲ್ಲಿ, ನಮ್ಮ ರೋಗನಿರೋಧಕ ಶಕ್ತಿ ಬಗ್ಗೆ ಕಾಳಜಿ ವಹಿಸುವುದು ಅತ್ಯಂತ ಮಹತ್ವದ್ದಾಗಿದೆ. ನಮ್ಮ ಪ್ರತಿರೋಧಕ ಶಕ್ತಿ ಕಾಲಕಾಲಕ್ಕೆ ಬದಲಾಗುತ್ತದೆ. ವಯಸ್ಸು ಹೆಚ್ಚಾದಂತೆ, ನಮ್ಮ ರೋಗ ನಿರೋಧಕ ಕಾರ್ಯಗಳು ಕ್ಷೀಣಿಸಲು ಪ್ರಾರಂಭಿಸುತ್ತವೆ.
ರೋಗನಿರೋಧಕ ಶಕ್ತಿಯ ಪ್ರಶ್ನೆ ಬಂದಾಗ ಉಳಿದೆಲ್ಲವೂ ಗೌಣ ಆಗುತ್ತವೆ. ಸೋಂಕಿನ ಸಂದರ್ಭದಲ್ಲಿಯಂತೂ ಇದು ನಿಜ. ದೇಹದ ಪ್ರತಿರಕ್ಷಣಾ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಿದರೆ, ಯಾವುದೇ ಪ್ರತಿಜನಕಗಳು ದೇಹದ ಮೇಲೆ ದಾಳಿ ಮಾಡಲು ಸಾಧ್ಯ ಇಲ್ಲ. ವಯಸ್ಸಾದವರಲ್ಲಿ ಅನೇಕರು ಕೋವಿಡ್ 19 ಸೋಂಕಿಗೆ ತುತ್ತಾಗುತ್ತ ಇದ್ದಾರೆ. ವಯೋವೃದ್ಧ ಜನಸಮೂಹದಲ್ಲಿ ರೋಗದ ತೀವ್ರತೆ ಹೆಚ್ಚಾಗಿ ಕಂಡು ಬರುತ್ತಿದೆ. ಆದ್ದರಿಂದ, ಎಲ್ಲರ ಕಣ್ಣುಗಳು ಈಗ ರೋಗನಿರೋಧಕ ಶಕ್ತಿಯ ಮೇಲೆ ನೆಟ್ಟಿವೆ. ವಾಸ್ತವವಾಗಿ, ನಮ್ಮ ತಾಯಿಯ ಗರ್ಭದಲ್ಲಿ ಇರುವ ಹೊತ್ತಿನಿಂದಲೇ ನಾವು ರೋಗ ನಿರೋಧಕ ಶಕ್ತಿ ಪಡೆದಿರುತ್ತೇವೆ. ಭ್ರೂಣವು ಇಮ್ಯುನೋಗ್ಲೋಬುಲಿನ್ ಗಳ ಮೂಲಕ ತಾಯಿಯ ಹೊಟ್ಟೆಯಲ್ಲಿ ಇರುವಾಗಲೇ ರೋಗನಿರೋಧಕ ಶಕ್ತಿ ಪಡೆಯುತ್ತದೆ. ತಾಯಿಯ ಆರೋಗ್ಯ ಸ್ಥಿತಿ, ರೋಗಗಳಿಗೆ ಮತ್ತು ಲಸಿಕೆಗಳಿಗೆ ಆಕೆಯ ದೇಹ ಒಡ್ಡಿಕೊಂಡ ರೀತಿಯನ್ನು ಇದು ಅವಲಂಬಿಸಿರುತ್ತದೆ.
ಸ್ತನ್ಯಪಾನ ಮಾಡುವಾಗ ಕೆಲವು ಇಮ್ಯುನೋಗ್ಲೋಬುಲಿನ್ ಗಳು ಮಗುವಿಗೆ ರವಾನೆ ಆಗುತ್ತವೆ. ಹೀಗೆ ಪಡೆದ ರೋಗನಿರೋಧಕ ಶಕ್ತಿ ಕೆಲವು ತಿಂಗಳುಗಳ ತನಕ ಇರುತ್ತದೆ. ಕರುಳಿನಲ್ಲಿರುವ ಸೋಂಕು, ಲಸಿಕೆ ಮತ್ತು ಬ್ಯಾಕ್ಟೀರಿಯಾಗಳು ನಂತರ ನೈಸರ್ಗಿಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ರೂಪಿಸುತ್ತವೆ. ಆದರೆ ಹದಿಹರೆಯದಿಂದ ಆರಂಭವಾಗಿ ನೈಸರ್ಗಿಕ ಪ್ರತಿರೋಧಕತೆ ವಯಸ್ಸಿಗೆ ತಕ್ಕಂತೆ ಕ್ಷೀಣವಾಗುತ್ತದೆ, 60ರ ವಯಸ್ಸಿನ ಹೊತ್ತಿಗೆ, ಕ್ಷೀಣಿಸುವಿಕೆ ತ್ವರಿತ ಮತ್ತು ಬಿರುಸಿನಿಂದ ಕೂಡಿರುತ್ತದೆ. ಆದರೆ ಒಳ್ಳೆಯ ಸಂಗತಿ ಏನೆಂದರೆ, ವಯಸ್ಸಿನ ಭೇದ ಇಲ್ಲದೆ ಕೆಲವು ಜನರಿಗೆ ಹೆಚ್ಚು ರೋಗನಿರೋಧಕ ಶಕ್ತಿ ಮತ್ತು ಕೆಲವರಿಗೆ ಕಡಿಮೆ ರೋಗನಿರೋಧಕ ಶಕ್ತಿ ಇರುತ್ತದೆ. ಕೆಲವು ಸರಳ ಕ್ರಮಗಳನ್ನು ಕೈಗೊಳ್ಳುವ ಮೂಲಕ ಯಾರು ಬೇಕಾದರೂ ತಮ್ಮ ರೋಗನಿರೋಧಕ ಶಕ್ತಿಯನ್ನು ಮರಳಿ ಪಡೆಯಬಹುದು.
1918 ರ ಸ್ಪ್ಯಾನಿಷ್ ಜ್ವರದ ನಂತರ ಎರಗಿದ ಎರಡನೇ ಅತಿದೊಡ್ಡ ಸಾಂಕ್ರಾಮಿಕ ಕಾಯಿಲೆ ಎಂದು ಕೋವಿಡ್- 19 ಅನ್ನು ಪರಿಗಣಿಸಲಾಗಿದೆ. ಇನ್ನೂ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಇಲ್ಲದೆ ಇರುವುದರಿಂದ ಕೊರೊನಾ ವೈರಸ್ ಇಲ್ಲಿಯೇ ಠಿಕಾಣಿ ಹೂಡಿದೆ. ಆದ್ದರಿಂದ, ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ಆದರೆ ಪ್ರತಿರೋಧಕ ಶಕ್ತಿ ಬೆಳೆಸುವುದು ಒಂದು ದಿನಕ್ಕೆ ಸಾಧ್ಯ ಆಗುವ ಕೆಲಸ ಅಲ್ಲ. ಇದನ್ನು ನಿರಂತರ ಅಭ್ಯಾಸದ ಮೂಲಕ ಸಾಧಿಸಲು ಸಾಧ್ಯ ಇದೆ. ಸತತ ಪ್ರಯತ್ನಗಳಿಂದ ಮಾತ್ರ ನಮ್ಮ ಮುಂದೆ ಠಳಾಯಿಸಿರುವ ಸುದೀರ್ಘ ಯುದ್ಧ ಗೆಲ್ಲಬಹುದು ಎಂಬುದನ್ನು ನಾವು ನೆನಪಿನಲ್ಲಿ ಇಡಬೇಕು.
ಥೈಮಸ್ ಗ್ರಂಥಿಯು ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಪ್ರಮುಖ ಕಾರ್ಯ ವಹಿಸುತ್ತದೆ. ಇದು ಎದೆ ಮೂಳೆಯ ಹಿಂದೆ ಇದೆ. ಸೋಂಕುಗಳ ವಿರುದ್ಧ ಹೋರಾಡಲು ಟಿ ಲಿಂಫೋಸೈಟ್‌ಗಳಿಗೆ ಇಲ್ಲಿ ತರಬೇತಿ ದೊರೆಯುತ್ತದೆ. ಬಾಲ್ಯದಲ್ಲಿ ಸಕ್ರಿಯವಾಗಿರುವ ಥೈಮಸ್ ಗ್ರಂಥಿಯು ವಯಸ್ಸಿಗೆ ಅನುಗುಣವಾಗಿ ಕ್ಷೀನಿಸುತ್ತದೆ. ಹದಿಹರೆಯದ ಪ್ರಾರಂಭದಿಂದ, ಗ್ರಂಥಿಯು ಪ್ರತಿವರ್ಷ ಶೇ 3 ರಷ್ಟು ಕಡಿಮೆ ಆಗುತ್ತದೆ ಮತ್ತು ವೃದ್ಧಾಪ್ಯದಲ್ಲಿ ಸಂಪೂರ್ಣ ಕಣ್ಮರೆ ಆಗುತ್ತದೆ. ವೃದ್ಧಾಪ್ಯದಲ್ಲಿ ಹೊಸ ಸೋಂಕುಗಳನ್ನು ಎದುರಿಸಲು ಕಷ್ಟವಾಗುವುದಕ್ಕೆ ಇದರ ಕಣ್ಮರೆ ಕೂಡ ಒಂದು ಕಾರಣ. ಮಕ್ಕಳಲ್ಲಿ ಕಡಿಮೆ ಸಂಖ್ಯೆಯಲ್ಲಿ ಕೋವಿಡ್- 19 ಸೋಂಕು ಹರಡುತ್ತಿರುವುದಕ್ಕೆ ಥೈಮಸ್ ಗ್ರಂಥಿಯೂ ಒಂದು ಕಾರಣ ಎನ್ನಬಹುದು.
ರೋಗನಿರೋಧಕ ವ್ಯವಸ್ಥೆ ನಮ್ಮ ದೇಹದಲ್ಲಿ ಎರಡನೆಯ ಅತ್ಯಂತ ಸಂಕೀರ್ಣ ಕಾರ್ಯವಿಧಾನವಾಗಿದೆ. ಇದು ನೂರಾರು ವಿಭಿನ್ನ ರೀತಿಯ ಜೀವಕೋಶಗಳು, ಜೈವಿಕ ರಚನೆಗಳು ಮತ್ತು ಅವುಗಳನ್ನು ಚಲಾಯಿಸುವ 8,000 ಜೀನ್‌ಗಳಿಂದ ಕೂಡಿದೆ. ಇದು ಎರಡು ಹಂತದ ರಕ್ಷಣೆಯನ್ನು ಒದಗಿಸುವ ಕೆಲಸ ಮಾಡುತ್ತದೆ. ನಾವು ಹುಟ್ಟಿದ ಸಹಜ ವ್ಯವಸ್ಥೆ: ಈ ವ್ಯವಸ್ಥೆಯು ಯಾವುದೇ ಹೊರ ವೈರಿಗಳನ್ನು ಎದುರಿಸಲು ಮತ್ತು ಕೊಲ್ಲಲು ತಕ್ಷಣವೇ ನ್ಯೂಟ್ರೋಫಿಲ್ ಮತ್ತು ಮ್ಯಾಕ್ರೋಫೇಜ್‌ಗಳನ್ನು ಉತ್ಪಾದಿಸುತ್ತದೆ. ಎರಡನೆಯದು ಹೊಂದಾಣಿಕೆಯ ಪ್ರತಿರಕ್ಷಣಾ ವ್ಯವಸ್ಥೆ. ಸೂಕ್ಷ್ಮಜೀವಿಗಳು ಅಥವಾ ಸೂಕ್ಷ್ಮಜೀವಿಗಳಿಂದ ಬಿಡುಗಡೆಯಾಗುವ ರಾಸಾಯನಿಕಗಳಿಗೆ ನಮ್ಮ ದೇಹ ಒಡ್ಡಿಕೊಂಡಾಗ ನಾವು ಪ್ರತಿರೋಧಕ ಶಕ್ತಿ ಪಡೆಯುತ್ತೇವೆ. ಇದು ಟಿ ಕೋಶಗಳು, ಬಿ ಕೋಶಗಳು ಮತ್ತು ಪ್ರತಿಕಾಯಗಳನ್ನು ಒಳಗೊಂಡಿದೆ.
ಅವು ನಿಧಾನಗತಿಯಲ್ಲಿ ದಾಳಿಗೆ ಇಳಿಯುತ್ತವೆ. ಬಿ ಕೋಶಗಳಿಗೆ ಸ್ಮರಣಶಕ್ತಿ ಕೂಡ ಇರುತ್ತದೆ. ನಮ್ಮ ದೇಹಕ್ಕೆ ಸೋಂಕು ತಗುಲಿದ ಹಿಂದಿನ ಸೂಕ್ಷ್ಮಾಣುಜೀವಿಗಳನ್ನು ಅವು ನೆನಪು ಮಾಡಿಕೊಳ್ಳುತ್ತವೆ ಮತ್ತು ಎರಡನೇ ದಾಳಿಯ ಸಂದರ್ಭದಲ್ಲಿ, ಅವುಗಳನ್ನು ಕೊಲ್ಲಲು ಪ್ರತಿಕಾಯಗಳನ್ನು ಸೃಜಿಸುತ್ತವೆ. ಇನ್ನು ಸಾಂಕ್ರಾಮಿಕ ವೈರಸ್‌ನಂತಹ ವೈರಾಣುಗಳು ಬಿ ಜೀವಕೋಶಗಳ ನಿಗಾದಿಂದ ತಪ್ಪಿಸಿಕೊಳ್ಳಲು ತಮ್ಮ ಆನುವಂಶಿಕ ರಚನೆ ಬದಲಾಯಿಸುತ್ತವೆ. ಕೋವಿಡ್ ವೈರಸ್ ಕೂಡ ಈ ರೀತಿ ಕಾರ್ಯನಿರ್ವಹಿಸಿ ರೋಗ ನಿರೋಧಕ ಶಕ್ತಿಗೆ ಪೆಟ್ಟು ನೀಡುತ್ತಿದೆ.
ಬಹುತೇಕ ಜನರಿಗೆ ತಮ್ಮ ಕ್ಷೀಣಿಗೊಂಡ ಪ್ರತಿರಕ್ಷಣಾ ವ್ಯವಸ್ಥೆಯಿಂದ ಯಾವುದೇ ಗಂಭೀರ ತೊಂದರೆ ಎದುರಾಗದು. ವಾಸ್ತವವಾಗಿ, ನಮ್ಮ ಪ್ರತಿರೋಧಕತೆ ಹದಿಹರೆಯದ ವಯಸ್ಸಿನಿಂದ ಕ್ರಮೇಣ ಕುಸಿಯುತ್ತದೆ. ನಮ್ಮ ಜೀವನಶೈಲಿಯ ವಿವಿಧ ಅಂಶಗಳು ಸಹ ಅವನತಿಗೆ ಕಾರಣ ಆಗುತ್ತವೆ. ಜಡ ಜೀವನಶೈಲಿ, ಧೂಮಪಾನ ಮತ್ತು ಮದ್ಯಪಾನ ಮಾಡುವ ವ್ಯಸನಿಗಳು ಸಾಮಾನ್ಯರಿಗಿಂತಲೂ ಕಡಿಮೆ ರೋಗನಿರೋಧಕ ಶಕ್ತಿ ಪಡೆದಿರುತ್ತಾರೆ. ಸಾಮಾನ್ಯವಾಗಿ, ಹೊರ ವೈರಿಯು ದೇಹದೊಳಗೆ ಪ್ರವೇಶಿಸಿದಾಗ, ನ್ಯೂಟ್ರೋಫಿಲ್ ಗಳು (ಒಂದು ರೀತಿಯ ಡಬ್ಲ್ಯೂ ಬಿ ಸಿ ) ಮೊದಲು ಅಖಾಡಕ್ಕೆ ಇಳಿಯುತ್ತವೆ. ಸೋಂಕಿನ ವಿರುದ್ಧ ಹೋರಾಡಲು ಅವು ಸೈಟೊಕಿನ್‌ಗಳಂತಹ ಕಿಣ್ವಗಳನ್ನು ಬಿಡುಗಡೆ ಮಾಡುತ್ತವೆ. ವಯಸ್ಸು ಹೆಚ್ಚಾದಂತೆ ನ್ಯೂಟ್ರೋಫಿಲ್ ಗಳು ಸಹ ಗೊಂದಲಕ್ಕೆ ಒಳಗಾಗುತ್ತವೆ.