ಮಲಪ್ಪುರಂ:ಮಾಂಸಕ್ಕಾಗಿ ಕಾಡೆಮ್ಮೆಗಳನ್ನು ಗುಂಡಿಕ್ಕಿ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಆರೋಪಿಗಳನ್ನು ಇಲ್ಲಿನ ಅರಣ್ಯಾಧಿಕಾರಿಗಳು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಬಂಧಿತರನ್ನು ಇಂದು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ.
ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುಂಚಾ ಮೂಲದ ಸುರೇಶ್ ಬಾಬು ಎಂಬ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಕ್ಕೆ ಒಪ್ಪಿಸಲಾಗಿತ್ತು. ಇದೀಗ ಅರಣ್ಯಾಧಿಕಾರಿಗಳು ಮತ್ತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಲಪ್ಪುರಂ ಜಿಲ್ಲೆಯ ಪುಂಚಾ ಮೂಲದ ಅಬು ಅಲಿಯಾಸ್ ನಾನಿಪ್ಪಾ (47), ಮುಹಮ್ಮದ್ ಬುಸ್ತಾನ್ (30), ಮುಹಮ್ಮದ್ ಅನ್ಸಿಫ್ (23), ಆಶಿಕ್ (27) ಮತ್ತು ಸುಹೇಲ್ (28) ಬಂಧಿತ ಆರೋಪಿಗಳೆಂದು ತಿಳಿದು ಬಂದಿದೆ.
ಬೇಟೆಯಾಡಿದ ಮಾಹಿತಿ ಆಧರಿಸಿ ಅರಣ್ಯ ಇಲಾಖೆಯ ಅಧಿಕಾರಿಗಳು ಆ. 10ರ ರಾತ್ರಿ ಅಬುವಿನ ಮನೆ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಸುಮಾರು 25 ಕಿ.ಗ್ರಾಂ. ಮಾಂಸ ದೊರೆತಿತ್ತು. ಈ ಮಾಂಸ ಗುಂಡಿಕ್ಕಿ ಕೊಂದಿದ್ದ ಕಾಡೆಮ್ಮೆಗಳದ್ದೆಂದು ತನಿಖೆಯಿಂದ ತಿಳಿದು ಬಂದಿತ್ತು. ಇದೇ ವೇಳೆ ಪ್ರಾಣಿಗಳನ್ನು ಬೇಟೆಯಾಡಲು ಬಳಸುವ ಉಪಕರಣಗಳು, ಪ್ರಾಣಿಗಳ ಅಸ್ಥಿಪಂಜರ ಸಹ ದೊರೆತಿದ್ದವು.