ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಜನರ ಸೇರುವಿಕೆ ಮೇಲೆ ನಿರ್ಬಂಧ ವಿಧಿಸಲು ತೀರ್ಮಾನಿಸಲಾಗಿದೆ.
ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸದ ಮಾರುಕಟ್ಟೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಅಧಿಕಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಸುದ್ದಿಗೋಷ್ಠಿ ಕೊರೊನಾ ಸೋಂಕು ಕಡಿಮೆಯಾದ ಮೇಲೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ, ಮದುವೆ ಸೇರಿದಂತೆ ಇತರ ಸಾರ್ವಜನಿಕ ಸಮಾರಂಭಗಳಲ್ಲಿ 200 ಜನರು ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಆದರೆ, ಇದೀಗ ಈ ಸಂಖ್ಯೆಯನ್ನು 50ಕ್ಕೆ ಇಳಿಸಲಾಗಿದ್ದು, ಈ ಕುರಿತು ಪ್ರಸ್ತಾವನೆಯನ್ನು ಲೆಫ್ಟಿನೆಂಟ್ ಜನರಲ್ ಅವರಿಗೆ ಕಳುಹಿಸಿ ಕೊಡಲಾಗಿದೆ.
ಈಗಾಗಲೇ ದೆಹಲಿಗೆ 750 ಹೆಚ್ಚುವರಿ ಐಸಿಯು ಹಾಸಿಗೆಗಳನ್ನು ಕೇಂದ್ರ ಸರ್ಕಾರ ಪೂರೈಸಿದ್ದು, ಕೊರೊನಾ ತಡೆಗಟ್ಟಲು ನೆರವು ನೀಡುತ್ತಿರುವ ಕೇಂದ್ರ ಸರ್ಕಾರಕ್ಕೆ ಕೇಜ್ರಿವಾಲ್ ಧನ್ಯವಾದ ಸಲ್ಲಿಸಿದ್ದಾರೆ.