ಕರ್ನಾಟಕ

karnataka

ETV Bharat / bharat

ಏಪ್ರಿಲ್​ 7ಕ್ಕೆ ಕೊರೊನಾ ಮುಕ್ತ ತೆಲಂಗಾಣ: ಸಿಎಂ ಕೆಸಿಆರ್​ ಭರವಸೆ - ಕೋವಿಡ್​-19

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈವರೆಗೂ 11 ಮಂದಿ ಸೋಂಕಿತರನ್ನು ತೆಲಂಗಾಣದಲ್ಲಿ ಗುಣಪಡಿಸಲಾಗಿದೆ. ಎಲ್ಲಾ ಅಂದುಕೊಂಡಂತೆ ನಡೆದ್ರೆ ಏಪ್ರಿಲ್​ 7ಕ್ಕೆ ತೆಲಂಗಾಣ ಕೊರೊನಾ ಮುಕ್ತವಾಗಲಿದೆ ಎಂದು ಸಿಎಂ ಕೆಸಿಆರ್​ ಭರವಸೆ ನೀಡಿದ್ದಾರೆ.

Telangana cm chandrashekar rao
ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್

By

Published : Mar 30, 2020, 9:36 AM IST

ಹೈದರಾಬಾದ್: ತೆಲಂಗಾಣದಲ್ಲಿ 70 ಕೊರೊನಾ ಸೋಂಕಿತ ಪ್ರಕರಣಗಳಿದ್ದು ಇವುಗಳಲ್ಲಿ 11 ಸೋಂಕಿತರನ್ನು ಗುಣಪಡಿಸಲಾಗಿದೆ. 50 ಮಂದಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದ್ದು ಅಂದುಕೊಂಡಂತೆ ನಡೆದರೆ ಏಪ್ರಿಲ್​ 7ಕ್ಕೆ ರಾಜ್ಯ ಸಂಪೂರ್ಣವಾಗಿ ಕೊರೊನಾ ವೈರಸ್​ ಮುಕ್ತವಾಗುತ್ತದೆ ಎಂದು ಸಿಎಂ ಕೆ.ಚಂದ್ರಶೇಖರ್ ರಾವ್ ಭರವಸೆ ನೀಡಿದ್ದಾರೆ.

ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಚಂದ್ರಶೇಖರ್​ ರಾವ್ ಗುಣಮುಖರಾದವರನ್ನು ಸೋಮವಾರ ಬಿಡುಗಡೆ ಮಾಡಲಾಗುತ್ತದೆ. ಇತರ ದೇಶಗಳಿಂದ ಬಂದ 25,937 ಮಂದಿಯ ಮೇಲೆ ತೀವ್ರ ನಿಗಾ ಇಡಲಾಗಿದೆ. ಏಪ್ರಿಲ್​ 7 ನಂತರ ಯಾವುದೇ ಹೊಸ ಪ್ರಕರಣಗಳು ದಾಖಲಾಗದಿದ್ದರೆ ರಾಜ್ಯ ಕೊರೊನಾ ವೈರಸ್​ ಮುಕ್ತವಾಗಲಿದೆ ಎಂದರು. ಜೊತೆಗೆ ಲಾಕ್​ಡೌನ್​ ಅವಧಿಯಲ್ಲಿ ಸ್ವಯಂ ನಿಯಂತ್ರಣ ಅಗತ್ಯವಾಗಿದ್ದು, ಹೋಮ್​ ಕ್ವಾರಂಟೈನ್​ ಅನ್ನು ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಇದೇ ವೇಳೆ ರೈತರ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ ಚಂದ್ರಶೇಖರ್ ರಾವ್ '' ರೈತರು ಬೆಳೆದ ತರಕಾರಿ ಹಾಗೂ ದವಸ, ಧಾನ್ಯಗಳನ್ನು ಗ್ರಾಮಗಳಿಂದ ಖರೀದಿಸಲಾಗುವುದು. ಇದಕ್ಕೆ ದಿನಾಂಕ ನಿಗದಿಪಡಿಸಲಾಗುತ್ತದೆ. ಈ ವೇಳೆ ನಾವು ಶಿಸ್ತು ಕಾಪಾಡಿಕೊಂಡರೆ ಕೊರೊನಾ ಹರಡುವುದನ್ನು ತಪ್ಪಿಸಬಹುದು'' ಎಂದ ಅವರು​'' ರೈತರು ತಮ್ಮ ಬೆಳೆಗಳನ್ನು ನೀಡಲು ಬಂದಾಗ ಪಾಸ್ ಬುಕ್​ಗಳನ್ನು ತರಬೇಕು. ಅವರ ಹಣವನ್ನು ಆನ್​ಲೈನ್​​ನಲ್ಲಿ ಪಾವತಿ ಮಾಡಲಾಗುತ್ತದೆ'' ಎಂದರು.

ಗ್ರಾಮಸ್ಥರು ತಮ್ಮ ತಮ್ಮ ಗ್ರಾಮಗಳಿಗೆ ಬೇಲಿ ಹಾಕುತ್ತಿರುವುದು ಸ್ವಾಗತಾರ್ಹ. ಯಾರನ್ನು ಗ್ರಾಮದೊಳಗೆ ಪ್ರವೇಶಿಸಲು ಅನುಮತಿಸಬೇಕು, ಯಾರಿಗೆ ಅವಕಾಶ ನೀಡಬಾರದು ಎಂಬುದನ್ನು ಅರಿತಿರಬೇಕು ಎಂದು ಸೂಚನೆ ನೀಡಿದರು. ಇದೇ ವೇಳೆ ಕೊರೊನಾ ವಿರುದ್ಧ ವದಂತಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details