ನವದೆಹಲಿ:ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನನ್ನ ನಮನ, ಕಾರ್ಗಿಲ್ ಹೀರೋಗಳು ನಮ್ಮ ದೇಶಕ್ಕೆ ಮಾದರಿಯಾಗಿದ್ದು, ಅವರ ತ್ಯಾಗ, ಬಲಿದಾನ ಯಾವುದೇ ಕಾರಣಕ್ಕೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದರು.
ಇಂದಿರಾಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ 'ಕಾರ್ಗಿಲ್ ವಿಜಯ್ ದಿವಸ್' ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯೋಧರು ಹಾಗೂ ಅವರ ಕುಟುಂಬದ ಅಭಿವೃದ್ಧಿಗಾಗಿ ಕಳೆದ ಐದು ವರ್ಷಗಳಲ್ಲಿ ಅನೇಕ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದು, ಅವುಗಳು ಅನೇಕ ವರ್ಷಗಳಿಂದ ಹಾಗೆಯೇ ಇದ್ದವು ಎಂದು ತಿಳಿಸಿದರು. ಹುತಾತ್ಮರಾದ ಯೋಧರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಸರ್ಕಾರವೇ ವಹಿಸಿಕೊಂಡಿದ್ದು, ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದರು.
'ಕಾರ್ಗಿಲ್ ವಿಜಯ್ ದಿವಸ್' ಹುತಾತ್ಮ ಯೋಧರು ಹಾಗೂ ಅವರ ಕುಟುಂಬಗಳಿಗೆ ಅರ್ಪಿಸೋಣ ಎಂದ ಪಿಎಂ, ದೇಶದ ಪ್ರತಿಯೊಬ್ಬ ಪ್ರಜೆ ಕಾರ್ಗಿಲ್ ಯೋಧರಿಗೆ ಗೌರವ ನೀಡಬೇಕು. ಕಾರ್ಗಿಲ್ ಯೋಧರ ಶೌರ್ಯ ನಮ್ಮ ದೇಶಕ್ಕೆ ಮಾದರಿಯಾಗಿದ್ದು, ಹುತಾತ್ಮ ಯೋಧರ ತಾಯಂದಿರ ಕಣ್ಣೀರು ಒರೆಸಬೇಕಾಗಿದೆ. ಅವರಿಗೆ ಜನ್ಮ ನೀಡಿದ ತಾಯಂದಿರಗಎ ನನ್ನ ನಮನ ಎಂದು ಭಾವುಕರಾಗಿ ನುಡಿದರು.