ನವದೆಹಲಿ:ತನ್ನ ಸಂಜಾತರ ಯಾವುದೇ ಸಾಧನೆಯನ್ನು, ಅವರು ಅದೆಷ್ಟೇ ಅಪ್ರಸ್ತುತರಾಗಿದ್ದರೂ, ಹೆಮ್ಮೆಯಿಂದ ಅಪ್ಪಿಕೊಳ್ಳುವುದು, ಮುಖ್ಯವಾಗಿ ಇತ್ತೀಚಿನ ವರ್ಷಗಳಲ್ಲಿ, ಭಾರತ ಸರಕಾರದ ಸಾಂಪ್ರದಾಯಿಕ ನಡವಳಿಕೆಯೇ ಆಗಿತ್ತು. ಈ ಕಾರಣಕ್ಕಾಗಿ, ಬಿಳಿಯ ವ್ಯಕ್ತಿಯಲ್ಲದ ಹಾಗೂ ಭಾರತೀಯ ಮೂಲದ ಮೊದಲ ಮಹಿಳೆಯಾದ ಕಮಲಾ ಹ್ಯಾರಿಸ್ ಅವರನ್ನು ಅಮೆರಿಕದ ಪ್ರಮುಖ ರಾಜಕೀಯ ಪಕ್ಷವೊಂದು ಅತ್ಯುನ್ನತ ಸ್ಥಾನವಾದ ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿಯಾಗಿ ಘೋಷಿಸಿರುವುದಕ್ಕೆ ಸರಕಾರ ತೋರಿರುವ ಗಾಢ ಮೌನದ ಪ್ರತಿಕ್ರಿಯೆ, ಅತೀವ ಅಚ್ಚರಿ ಮೂಡಿಸಿದೆ.
ಕಮಲಾ ಹ್ಯಾರಿಸ್ ಅವರು ತಮಿಳುನಾಡು ಮೂಲದವರು. ಅಲ್ಲಿಂದ ವಲಸೆ ಹೋದ ಮೊದಲ ತಲೆಮಾರಿಗೆ ಸೇರಿದವರು. ತಮ್ಮ ಭಾರತೀಯ ತಾಯಿಯಿಂದ ತಾವು ಕಲಿತ ಬದುಕಿನ ಪಾಠಗಳು ಹಾಗೂ ತಮ್ಮ ಮೂಲದ ಕುರಿತು ಸದಾ ಉನ್ನತವಾಗಿ, ಹೆಮ್ಮೆಯಿಂದ ಹೇಳಿಕೊಂಡವರು. ಇಂತಹ ಮಹಿಳೆ, ನವೆಂಬರ್‌ನಲ್ಲಿ, ಜಗತ್ತಿನ ಅತ್ಯಂತ ಪ್ರಮುಖ ಹುದ್ದೆ ಎಂದು ಪರಿಗಣಿಸಲಾಗಿರುವ ಅಮೆರಿಕದ ಉಪಾಧ್ಯಕ್ಷ ಹುದ್ದೆಗೆ ಅತ್ಯಂತ ಹತ್ತಿರಕ್ಕೆ ತಲುಪಿದ್ದರು.
ಭಾರತೀಯ ಮೂಲದ ವ್ಯಕ್ತಿಗಳು ಹಲವಾರು ದೇಶಗಳಲ್ಲಿದ್ದಾರೆ. ಕ್ಯಾರಿಬಿಯನ್‌ನಿಂದ ಹಿಡಿದು ಪೋರ್ಚ್‌ಗಲ್ ಹಾಗೂ ಐರ್‌ಲ್ಯಾಂಡ್, ಸಿಂಗಾಪುರ, ಫಿಜಿ ಹಾಗೂ ಮಾರಿಷಸ್ ದೇಶಗಳ ಉನ್ನತ ನಾಯಕರು ಭಾರತೀಯ ಮೂಲನಿವಾಸಿಗಳಾಗಿದ್ದಾರೆ. ಹೀಗಿರುವಾಗ, ಭಾರತೀಯ ಮೂಲದ ಮಹಿಳೆಯೊಬ್ಬರು ಅಮೆರಿಕದ ಉಪಾಧ್ಯಕ್ಷ ಹುದ್ದೆಗೆ ಏರುವ ಸಾಧ್ಯತೆಯಲ್ಲಿರುವ ಬೆಳವಣಿಗೆಯನ್ನು ಭಾರತ ಹಾಗೂ ಅಮೆರಿಕದ ಮಾಧ್ಯಮ ಹಾಗೂ ಅನಿವಾಸಿ ಭಾರತೀಯರ ನಡುವೆ ದೊಡ್ಡ ಸಂಭ್ರಮಕ್ಕೆ ಕಾರಣವಾಗಿತ್ತು.
ಭಾರತ ಸರಕಾರದ ಈ ಗಾಢ ಮೌನದ ಹಿಂದೆ ಹಲವಾರು ಕಾರಣಗಳಿವೆ. ಭಾರತ ಸರಕಾರವು ಟ್ರಂಪ್ ಆಡಳಿತಕ್ಕೆ ನಿಕಟವಾಗಿದೆ ಎಂದು ಭಾವಿಸಲಾಗಿದ್ದು, ಪ್ರಮುಖವಾಗಿ ಡೊನಾಲ್ಡ್ ಟ್ರಂಪ್ ಸರಕಾರವನ್ನು ಭಾರತ-ಪರ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಭಾರತದೊಂದಿಗಿನ ಸಂಬಂಧವನ್ನು ಎರಡೂ ಕಡೆಯಿಂದ, ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷಗಳ ಕಡೆಯಿಂದ, ಆಳವಾಗಿಸುವ ಪ್ರಯತ್ನಗಳು ನಡೆದಿರುವಾಗ, ಅಧ್ಯಕ್ಷ ಟ್ರಂಪ್ ಅವರನ್ನು ಬಹಿರಂಗವಾಗಿ ಬೆಂಬಲಿಸುವ ಭಾರತದ ಪ್ರಯತ್ನಗಳು ಡೆಮಾಕ್ರಟಿಕ್ ಪಕ್ಷಕ್ಕೆ ಪಥ್ಯವಾಗಿಲ್ಲ.
ಹೀಗಾಗಿ ಆ ಪಕ್ಷದ ಹಲವಾರು ನಾಯಕರು ನರೇಂದ್ರ ಮೋದಿ ನೇತೃತ್ವದ ಸರಕಾರದ ಹಲವಾರು ಕ್ರಮಗಳನ್ನು, ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ ವಿಧಿ ೩೭೦ರ ರದ್ದತಿ ಹಾಗೂ ಪೌರತ್ವ ತಿದ್ದುಪಡಿ ಕಾಯಿದೆಗಳನ್ನು (ಸಿಎಎ – ಸಿಟಿಝೆನ್‌ಶಿಪ್ ಅಮೆಂಡ್‌ಮೆಂಟ್ ಆಕ್ಟ್) ಬಹಿರಂಗವಾಗಿ ಕಟುವಾಗಿ ಟೀಕಿಸಿದ್ದಾರೆ. ಆ ಪಕ್ಷಕ್ಕೆ (ಡೆಮಾಕ್ರಟಿಕ್ ಪಕ್ಷ) ಸೇರಿದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಜೊತೆ ಮೋದಿ ಅವರು ಹೊಂದಿದ್ದ ನಿಕಟತೆಯ ಹೊರತಾಗಿಯೂ ಇಂತಹ ಪ್ರತಿಕ್ರಿಯೆ ಆ ಪಕ್ಷದಿಂದ ವ್ಯಕ್ತವಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಕುರಿತಂತೆ ಬಹಿರಂಗವಾಗಿ ಟೀಕೆ ಮಾಡಿದ್ದ ಅಮೆರಿಕದ ಡೆಮಾಕ್ರಟಿಕ್ ಪಕ್ಷದ ನಾಯಕರ ಪೈಕಿ ಕಮಲಾ ಹ್ಯಾರಿಸ್ ಕೂಡಾ ಒಬ್ಬರು. ಜಮ್ಮು ಮತ್ತು ಕಾಶ್ಮೀರ ಕುರಿತಂತೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ವಿದೇಶಾಂಗ ಸಂಬಂಧಗಳ ಸಮಿತಿಯ ಜೊತೆ ಸಭೆಯಲ್ಲಿ ಪಾಲ್ಗೊಳ್ಳದೇ ಹೊರಗುಳಿಯಲು ನಿರ್ಧರಿಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ ಅವರ ಕ್ರಮವನ್ನು ಕೂಡಾ ಅವರು ಟೀಕಿಸಿದ್ದರು. ಅದಕ್ಕೂ ಮುಂಚೆ, ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ, ಹೌಸ್ಟನ್‌ನಲ್ಲಿ ನಡೆದಿದ್ದ “ಹೌಡಿ ಮೋದಿ” ಕಾರ್ಯಕ್ರಮದಿಂದಲೂ ಅವರು ದೂರ ಉಳಿದಿದ್ದರು. ಭಾರತ-ಅಮೆರಿಕ ಮಿತ್ರತ್ವವನ್ನು ಸಂಭ್ರಮಿಸುವ ಉದ್ದೇಶದ ಆ ಕಾರ್ಯಕ್ರಮದಲ್ಲಿ, ಭಾರತೀಯ ಮೂಲದ ಹಲವಾರು ಸಂಸದರೂ ಇದ್ದ ಅಮೆರಿಕದ ಪ್ರಮುಖ ಸಂಸದರೊಂದಿಗೆ ಅಧ್ಯಕ್ಷ ಟ್ರಂಪ್ ಪಾಲ್ಗೊಂಡಿದ್ದರು.
ನವದೆಹಲಿಯ ಆಯಕಟ್ಟಿನ ಹುದ್ದೆಗಳಲ್ಲಿರುವ ಹಲವಾರು ಪ್ರಮುಖ ವ್ಯಕ್ತಿಗಳು ಖಾಸಗಿಯಾಗಿ ಹೇಳುವ ಪ್ರಕಾರ, ಟ್ರಂಪ್ ಅವರ ಪಾದರಸದಂತಹ ವ್ಯಕ್ತಿತ್ವದಿಂದಾಗಿ ಭಾರತ ಸರಕಾರ ಅವರ ಬೆನ್ನಿಗೆ ನಿಂತಿದೆ. ಈ ಕಾರಣಕ್ಕಾಗಿ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರ ಜೊತೆ ಸಹಸ್ಪರ್ಧಿಯಾಗಿರುವ ಕಮಲಾ ಹ್ಯಾರಿಸ್ ನಾಮನಿರ್ದೇಶನ ಕುರಿತಂತೆ ಅದು ಮೌನ ವಹಿಸಲು ಕಾರಣವಾಗಿದೆ. ಟ್ರಂಪ್ ಅವರ ಅಸಮಾಧಾನಕ್ಕೆ ಕಾರಣವಾಗಬಲ್ಲ ಯಾವ ನಡೆಯನ್ನೂ ಇರಿಸಲು ಮೋದಿ ಸರಕಾರ ಬಯಸುತ್ತಿಲ್ಲ. ಅದರಲ್ಲಿಯೂ ಪ್ರಮುಖವಾಗಿ, ವಾಣಿಜ್ಯಕ್ಕೆ ಸಂಬಂಧಿಸಿದಂತೆ ಸಾಮಾನ್ಯೀಕರಿಸಿದ ಆದ್ಯತಾ ವ್ಯವಸ್ಥೆಗೆ (ಜಿಎಸ್‌ಪಿ – ಜನರಲೈಸ್ಡ್ ಸಿಸ್ಟಂ ಆಫ್ ಪ್ರಿಫರೆನ್ಸ್) ಭಾರತವನ್ನು ಮತ್ತೆ ತರುವ ಸಾಧ್ಯತೆಯನ್ನು ಅಮೆರಿಕ ಶೀಘ್ರದಲ್ಲಿ ತೋರಬಹುದೆಂಬ ನಿರೀಕ್ಷೆಯೂ ಇರುವುದರಿಂದ, ಅಮೆರಿಕದ ಸರಕಾರದ ಮುನಿಸನ್ನು ತಂದುಕೊಳ್ಳಲು ಸರಕಾರ ಸಿದ್ಧವಿಲ್ಲ.
ಅಲ್ಲದೇ, ಗಡಿಯುದ್ದಕ್ಕೂ ಇರುವ ಸದ್ಯದ ಪರಿಸ್ಥಿತಿಯೂ ಇಂತಹ ನಿರ್ಧಾರಕ್ಕೆ ಕಾರಣವಾಗಿದೆ. ಚೀನಾದೊಂದಿಗಿನ ಭಾರತದ ಸಂಬಂಧಗಳೂ ಈಗಲೂ ಬಿಗುವಿನಿಂದಲೇ ಕೂಡಿವೆ. ಪಾಕಿಸ್ತಾನವನ್ನು ಚೀನಾ ಬೆಂಬಲಿಸುತ್ತಿರುವುದು ಹಾಗೂ ಭಾರತ ತನ್ನದೆಂದು ಹೇಳುತ್ತಿರುವ ಪ್ರದೇಶಗಳ ಮೇಲೆ ಅದು ಹಕ್ಕು ಸಾಧಿಸುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕದ ಆಡಳಿತದ ಬಹಿರಂಗ ಬೆಂಬಲವನ್ನು ಉಳಿಸಿಕೊಳ್ಳುವುದು ಭಾರತದ ಪಾಲಿಗೆ ಮಹತ್ವದ್ದಾಗಿದೆ.
ಇದೂ ಅಲ್ಲದೇ, ಮಾನವ ಹಕ್ಕುಗಳು ಹಾಗೂ ಧಾರ್ಮಿಕ ಸ್ವಾತಂತ್ರದಂತಹ ವಿಷಯಗಳಿಗೆ ಸಂಬಂಧಿಸಿದಂತೆ, ಡೆಮಾಕ್ರಟಿಕ್ ಪಕ್ಷವು ರಿಪಬ್ಲಿಕನ್ ಪಕ್ಷಕ್ಕಿಂತ ಯಾವಾಗಲೂ ಹೆಚ್ಚೇ ಧ್ವನಿ ಎತ್ತುತ್ತದೆ. ಇವೆರಡೂ ವಿಷಯಗಳು ನವದೆಹಲಿಯ ಆಡಳಿತಕ್ಕೆ ಹೆಚ್ಚು ಅಸಂತೃಪ್ತಿ ತರುವಂತಹವಾಗಿದ್ದು, ಈ ಕುರಿತ ಟೀಕೆಯನ್ನು ಅದು ಎಂದಿಗೂ ಒಪ್ಪಿಕೊಳ್ಳದು. ಪರಿಸರ ಹಾಗೂ ಜಾಗತಿಕ ತಾಪಮಾನ ಕುರಿತಂತಹ ವಿಷಯಗಳ ಕುರಿತು ಬಹುತೇಕ ಒಮ್ಮತ ಇದ್ದರೂ, ಇತ್ತೀಚಿನ ಪರಿಸರ ಸಂಬಂಧಿ ನೀತಿಗಳ ಕುರಿತು ಡೆಮಾಕ್ರಟಿಕ್ ಪಕ್ಷ ಹೆಚ್ಚು ನಿರ್ದಿಷ್ಟವಾಗಿದೆ. ಪರಿಸರ ಪ್ರಭಾವಿ ಅಂದಾಜಿನ (ಇಐಎ – ಎನ್ವೈರ್‌ಮೆಂಟಲ್ ಇಂಪ್ಯಾಕ್ಟ್ ಅಸೆಸ್‌ಮೆಂಟ್) ಅವಶ್ಯಕತೆಯನ್ನು ತೆಗೆದುಹಾಕಿದ ಭಾರತದ ಕ್ರಮವನ್ನು ಅದು ಪ್ರಶ್ನಿಸುವ ಸಾಧ್ಯತೆಯೂ ಇದೆ.
ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ, ಅಮೆರಿಕದ ಉಪಾಧ್ಯಕ್ಷ ಹುದ್ದೆಗೆ ಕಮಲಾ ಹ್ಯಾರಿಸ್ ಅವರ ನಾಮನಿರ್ದೇಶನ ಕುರಿತಂತೆ ಭಾರತಕ್ಕೆ ಆಗುವ ಲಾಭಗಳ ನಿರೀಕ್ಷೆಗಳು ತೀರಾ ಕಡಿಮೆ. ಹಾಗೆ ನೋಡಿದರೆ, ಈ ಕುರಿತಂತೆ ಸರಕಾರಕ್ಕೆ ಕೊಂಚ ಕಳವಳವೇ ಆದಂತಿದ್ದು, ಟ್ರಂಪ್ ಅವರನ್ನೇ ಮತ್ತೆ ಗೆಲ್ಲುವ ಅಭ್ಯರ್ಥಿ ಎಂದು ಅದು ನಿರ್ಧರಿಸಿದಂತಿದೆ. ಮುಖ್ಯವಾಗಿ, ಹೌಡಿ ಮೋದಿ ಕಾರ್ಯಕ್ರಮವು ಭಾರತೀಯ ಅಮೆರಿಕರನ್ನು ಉತ್ಸಾಹಿತರನ್ನಾಗಿಸಿದ್ದು, ಅವರೆಲ್ಲ ಟ್ರಂಪ್ ಪರ ಮತ ಚಲಾಯಿಸಬಹುದು ಎಂದು ಸರಕಾರ ಭಾವಿಸಿದಂತಿದೆ. ಅಹಮದಾಬಾದ್‌ನಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮವು ಟ್ರಂಪ್ ಅವರನ್ನು ಭಾರತದ ಮಿತ್ರ ಎಂಬಂತೆ ಬಿಂಬಿಸಲು ನಡೆಸಿದ ಪ್ರಯತ್ನವಾಗಿದ್ದರೂ, ಕಮಲಾ ಹ್ಯಾರಿಸ್ ಅವರನ್ನು ಅಮೆರಿಕದ ಉಪಾಧ್ಯಕ್ಷ ಹುದ್ದೆಯ ಅಭ್ಯರ್ಥಿಯಾಗಿಸಿದ ಪ್ರಯತ್ನ ಅಮೆರಿಕದಲ್ಲಿರುವ ಭಾರತೀಯ ವಲಸಿಗ ಸಂಜಾತರಲ್ಲಿ ವ್ಯಾಪಕ ಉತ್ಸಾಹದ ಅಲೆಗಳನ್ನು ಉಕ್ಕಿಸಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಬೆಂಬಲಿಸಬಹುದಾದವರ ಪೈಕಿ ಬಹುತೇಕರು ಕ್ಯಾಲಿಫೋರ್ನಿಯಾದ ಈ ಭಾರತೀಯ ಮೂಲದ ಮಹಿಳೆಯ ಬೆಂಬಲಕ್ಕೆ ನಿಲ್ಲುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಸಾಂಪ್ರದಾಯಿಕವಾಗಿ, ಭಾರತ ಸರಕಾರವು, ಜಗತ್ತಿನಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿರುವ ಹಾಗೂ ಭೂಮಂಡಲದ ಪ್ರತಿಯೊಂದೂ ಭಾಗದಲ್ಲಿ ನೆಲೆಸಿರುವ ತನ್ನ ೩ ಕೋಟಿ ಸಂಜಾತರ ಕುರಿತು ಸದಾ ಹೆಮ್ಮೆ ವ್ಯಕ್ತಪಡಿಸಿಕೊಂಡೇ ಬಂದಿದೆ. ಇವರಿಂದ ದೇಶದ ಆರ್ಥಿಕತೆಗೆ ವಾರ್ಷಿಕ ೮೦೦ ಬಿಲಿಯನ್ ಡಾಲರ್‌ಗಳ ವಿದೇಶಿ ವಿನಿಮಯವೂ ಹರಿದುಬರುತ್ತಿದ್ದು, ಜಗತ್ತಿನಲ್ಲಿ ಹೀಗೆ ಸಂದಾಯವಾಗುತ್ತಿರುವ ಅತಿ ದೊಡ್ಡ ಮೊತ್ತ ಇದು. ಭಾರತದ ನಿರ್ಮಾಣದಲ್ಲಿ ಅನಿವಾಸಿ ಭಾರತೀಯರು ಮತ್ತು ಭಾರತೀಯ ಸಂಜಾತರ ಕೊಡುಗೆ ಅಪಾರವಾಗಿದೆ. ಇದನ್ನು ಸ್ಮರಿಸುವ ದೃಷ್ಟಿಯಿಂದ, ಪ್ರತಿ ವರ್ಷ ಪ್ರವಾಸಿ ಭಾರತೀಯ ದಿವಸ್ (ಅನಿವಾಸಿ ಭಾರತೀಯರ ದಿನ) ಕಾರ್ಯಕ್ರಮವನ್ನು ಭಾರತ ಸರಕಾರ ಕಳೆದ ಎರಡು ದಶಕಗಳಿಂದ ಆಚರಿಸುತ್ತ ಬಂದಿದೆಯಲ್ಲದೇ, ಅವರಿಗೆ ಪ್ರಶಸ್ತಿಗಳನ್ನೂ ನೀಡುತ್ತಿದೆ.
ಭಾರತದಿಂದ ಹೋಗಿ ನೆಲೆಸಿರುವ ಮೊದಲ ಮತ್ತು ಎರಡನೇ ತಲೆಮಾರಿನ ಅನಿವಾಸಿ ಭಾರತೀಯರ ಸಂಖ್ಯೆಯಲ್ಲಿ ಅಮೆರಿಕವೇ ಮೊದಲ ಸ್ಥಾನದಲ್ಲಿದೆ. ಹೀಗೆ ಹೋಗಿ ನೆಲೆಸಿರುವ ಭಾರತೀಯ ಸಂಜಾತರು ವೃತ್ತಿಪರರಾಗಿ, ಶೈಕ್ಷಣಿಕವಾಗಿ, ವಿಜ್ಞಾನ, ತಂತ್ರಜ್ಞಾನ ಹಾಗೂ ಔದ್ಯಮಶೀಲತೆ ಮೂಲಕ ತಮ್ಮ ಮೂಲ ದೇಶಕ್ಕೆ ಹೆಮ್ಮೆ ತಂದವರಾಗಿದ್ದಾರೆ. ಅಮೆರಿಕವೊಂದರಲ್ಲಿಯೇ ನಲವತ್ತು ಲಕ್ಷ ಭಾರತೀಯ ಮೂಲದವರಿದ್ದಾರೆ. ಇವರೆಲ್ಲ ಅತ್ಯುತ್ತಮ ಶಿಕ್ಷಣ ಪಡೆದವರಾಗಿದ್ದು ವಲಸಿಗರ ಪೈಕಿ ಅತ್ಯಂತ ಶ್ರೀಮಂತರೂ ಆಗಿದ್ದಾರೆ. ಭಾರತ-ಅಮೆರಿಕ ದ್ವಿಪಕ್ಷೀಯ ಪಾಲುದಾರಿಕೆಯನ್ನು ಕೇವಲ ವ್ಯೂಹಾತ್ಮಕವಾಗಿ ಹಾಗೂ ಆರ್ಥಿಕ ದೃಷ್ಟಿಯಿಂದ ಬಲಪಡಿಸುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಷ್ಟೇ ಅಲ್ಲ, ಸಾಂಸ್ಕೃತಿಕವಾಗಿಯೂ ಎರಡೂ ದೇಶಗಳನ್ನು ಬೆಸೆಯುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.
ಅಮೆರಿಕದಲ್ಲಿರುವ ಸುಂದರ್ ಪಿಚೈ ಹಾಗೂ ಸತ್ಯ ನಾದೆಳ್ಳ ಅಂತಹ ಭಾರತೀಯರು ಅತ್ಯುನ್ನತ ತಂತ್ರಜ್ಞಾನ ಕಂಪನಿಗಳನ್ನು ಮುನ್ನಡೆಸುತ್ತಿದ್ದು, ಆ ಪೈಕಿ ಬಹುತೇಕ ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿರುವ ಗೂಗಲ್, ಮೈಕ್ರೊಸಾಫ್ಟ್, ಅಡೋಬ್ ಹಾಗೂ ಐಬಿಎಂನಂತಹ ಕಂಪನಿಗಳಿವೆ. ಇವರೆಲ್ಲರೂ ತಮ್ಮ ಭಾರತ ಮೂಲದೊಂದಿಗೆ ಸಾರ್ವಜನಿಕವಾಗಿ ಪ್ರಶಂಸೆಗೆ ಒಳಗಾಗಿರುವಂಥವರಾಗಿದ್ದು, ಅಮೆರಿಕ ಮತ್ತು ಭಾರತ ಎರಡಕ್ಕೂ ಭಾರತೀಯ ಔದ್ಯಮಶೀಲತೆಯೇ ಆರ್ಥಿಕತೆಯ ಪ್ರಗತಿಯ ಪ್ರಮುಖ ಎಂಜಿನ್ ಎಂಬುದಕ್ಕೆ ಇದು ಸ್ಪಷ್ಟ ಸಂಕೇತವಾಗಿದೆ. ಇತ್ತೀಚೆಗೆ, ಅಭಿಜಿತ್ ಬ್ಯಾನರ್ಜಿ ಅವರಿಗೆ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯೂ ಸಂದಿದೆ.
ಆದರೆ, ಪ್ರಮುಖ ರಾಜಕೀಯ ಪಕ್ಷದ ಟಿಕೆಟ್‌ಗೆ ನಾಮನಿರ್ದೇಶನಗೊಂಡಿರುವುದು ಹಾಗೂ ಕ್ಯಾಲಿಫೋರ್ನಿಯಾದ ಡೆಮಾಕ್ರಟಿಕ್ ಪಕ್ಷದ ಸಂಸದೆ ಜಗತ್ತಿನ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶದ ಅತ್ಯುನ್ನತ ಹುದ್ದೆಗೆ ಆಕಾಂಕ್ಷಿಯಾಗಿರುವುದು ಕಮಲಾ ಹ್ಯಾರಿಸ್ ಪಾಲಿಗೆ ಸಂದ ಅತಿ ದೊಡ್ಡ ಗೌರವವಾಗಿದ್ದರೂ, ಇಂತಹ ಸಂದರ್ಭಗಳಲ್ಲಿ ಈ ಗೆಲುವನ್ನು ತನ್ನದೇ ಎಂಬಂತೆ ಸಂಭ್ರಮಿಸುತ್ತಿದ್ದ ಭಾರತದಿಂದ ಆ ನೆಲದ ಈ ಮಹಿಳೆಗೆ ಒಂದು ಚಿಕ್ಕ ಪಿಸುಮಾತಿನ ಅಭಿನಂದನೆಯೂ ಸಲ್ಲಿಕೆಯಾಗದಿರುವುದು ಮಾತ್ರ ವಿಪರ್ಯಾಸವೇ ಸರಿ.
- ನಿಲೋವಾ ರಾಯ್ ಚೌಧರಿ