ರೊಹ್ಟಕ್(ಹರಿಯಾಣ): ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಮಸೂದ್ ಅಹ್ಮದ್ ಭಾರತದಲ್ಲಿ 20ಕ್ಕೂ ಹೆಚ್ಚು ದೇವಸ್ಥಾನ ಮತ್ತು ರೈಲ್ವೆ ನಿಲ್ದಾಣಗಳನ್ನ ಸ್ಫೋಟಿಸುವ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.
ರೋಹ್ಟಕ್ ರೈಲ್ವೆ ನಿಲ್ದಾಣಕ್ಕೆ ಜೈಶ್-ಎ-ಮೊಹಮ್ಮದ್ ಬರೆದ ಬೆದರಿಕೆ ಪತ್ರ ಬಂದಿದೆ. ಅಂಚೆ ಮೂಲಕ ರೋಹ್ಟಕ್‌ನ ರೈಲ್ವೆ ನಿಲ್ದಾಣ ಅಧೀಕ್ಷಕರಿಗೆ ಬಂದ ಪತ್ರದಲ್ಲಿ ರೋಹ್ಟಕ್ ಸೇರಿದಂತೆ ದೇಶಾದ್ಯಂತ 20ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳು ಮತ್ತು ದೇವಾಲಯಗಳಿಗೆ ಬಾಂಬ್ ಸ್ಫೋಟದ ಬೆದರಿಕೆ ಇದೆ. ಪತ್ರ ಬರೆದ ವ್ಯಕ್ತಿ ತನ್ನನ್ನು ಜಿಹಾದಿ ಎಂದು ಕರೆದುಕೊಂಡಿದ್ದು, ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾನೆ.
ರೋಹ್ಟಕ್‌ನ ರೈಲ್ವೆ ನಿಲ್ದಾಣ ಅಧೀಕ್ಷಕರಿಗೆ ಬಂದ ಬೆದರಿಕೆ ಪತ್ರ ಪತ್ರದಲ್ಲಿ ಏನಿದೆ?
ನಮ್ಮ ಜಿಹಾದಿಗಳ ಸಾವಿಗೆ ನಾವು ಖಂಡಿತವಾಗಿಯೂ ಪ್ರತೀಕಾರ ತೀರಿಸುತ್ತೇವೆ. ಈ ಬಾರಿ ನಾವು ಬಾಂಬ್ ಸ್ಫೋಟದಿಂದ ಭಾರತವನ್ನು ಭಯಭೀತಗೊಳಿಸುತ್ತೇವೆ. ಅಕ್ಟೋಬರ್ 8 ಅಂದರೆ ದಸರಾ ದಿನದಂದು. ರೇವರಿ, ರೋಹ್ಟಕ್, ಹಿಸಾರ್, ಕುರುಕ್ಷೇತ್ರ, ಮುಂಬೈ ನಗರ, ಚೆನ್ನೈ, ಬೆಂಗಳೂರು, ಭೋಪಾಲ್, ಜೈಪುರ, ಕೋಟಾ ಇಟಾರ್ಸಿ, ರಾಜಸ್ಥಾನ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ಹರಿಯಾಣ, ಉತ್ತರಪ್ರದೇಶದ ದೇವಾಲಯಗಳಿಲ್ಲಿ ಬಾಂಬ್ ಸ್ಫೋಟಿಸಲಾಗುವುದು. ಸಾವಿರಾರು ಜಿಹಾದಿಗಳು ಹಿಂದುಸ್ಥಾನವನ್ನ ನಾಶಪಡಿಸಲಿದ್ದಾರೆ ಎಂದು ಬರೆಯಲಾಗಿದೆ.
ಈಗಾಗಲೇ ರೋಹ್ಟಕ್ ರೈಲ್ವೆ ಪೊಲೀಸರು ಎಚ್ಚರಿಕೆ ಸಂದೇಶ ರವಾನಿಸಿದ್ದು, ರಾಜ್ಯದ ಇತರೆ ರೈಲ್ವೆ ನಿಲ್ದಾಣಗಳಲ್ಲಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.