ಮಲಪ್ಪುರಂ( ಕೇರಳ) :ಇತರ ಆನೆಗಳೊಂದಿಗಿನ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗಂಡಾನೆಯೊಂದು ಮೃತಪಟ್ಟ ಘಟನೆ ಜಿಲ್ಲೆಯ ಅರ್ಥಲಕುನ್ನುವಿನಲ್ಲಿ ನಡೆದಿದೆ.
ಆನೆಗಳ ನಡುವಿನ ಕಾದಾಟದಲ್ಲಿ ಗಾಯಗೊಂಡಿದ್ದ ಗಂಡಾನೆ ಸಾವು - ಕೇರಳದಲ್ಲಿ ಮತ್ತೊಂದು ಆನೆ ಸಾವು
ಆನೆಗಳ ಮಧ್ಯೆ ನಡೆದ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗಂಡಾನೆಯೊಂದು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟ ಘಟನೆ ಕೇರಳದ ಅರ್ಥಲಕುನ್ನು ಎಂಬಲ್ಲಿ ನಡೆದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮನ್ನಾರ್ಕಾಡ್ (ದಕ್ಷಿಣ) ವಿಭಾಗೀಯ ಅರಣ್ಯಾಧಿಕಾರಿ ಸಾಜಿಕುಮಾರ್, ಆನೆ ಗಂಭೀರವಾಗಿ ಗಾಯಗೊಂಡಿರುವುದು ಗೊತ್ತಾದ ಬಳಿಕ ನಾವು ಚಿಕಿತ್ಸೆ ಪ್ರಾರಂಭಿಸಿದೆವು. ಆರಂಭದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದ್ದರೂ ಕೊನೆಗೆ ಉಳಿಸಿಕೊಳ್ಳಲಾಗಲಿಲ್ಲ. ಆನೆಯ ದೇಹದ ಮೇಲೆ ಕಂಡು ಬಂದ ಗಾಯಗಳು ಮನುಷ್ಯರಿಂದ ಆಗಿಲ್ಲ. ಮಖಾನ (ದಂತವಿಲ್ಲದ ಗಂಡು ಆನೆ) ಇತರ ದಂತವಿರುವ ಆನೆಗಳೊಂದಿಗೆ ಕಾದಾಟ ನಡೆಸಿದ್ದರಿಂದ, ಅದರ ನಾಲಿಗೆ, ಹೊಟ್ಟೆ ಸೇರಿದಂತೆ ದೇಹದ ಸೂಕ್ಷ್ಮ ಭಾಗಳಿಗೆ ಗಾಯಗಳಾಗಿದ್ದವು ಎಂದು ಹೇಳಿದ್ದಾರೆ.
ಮುಖ್ಯ ಪಶುವೈದ್ಯ ಶಸ್ತ್ರಚಿಕಿತ್ಸಕ ಅರುಣ್ ಸಕರಿಯಾ ಮತ್ತು ಪಶುವೈದ್ಯ ಮಿಥುನ್ ಅವರ ಮೇಲ್ವಿಚಾರಣೆಯಲ್ಲಿ ಆನೆಗೆ ಚಿಕಿತ್ಸೆ ನೀಡಲಾಗಿತ್ತು. ಪಶುವೈದ್ಯಕೀಯ ವಿಶ್ವವಿದ್ಯಾಲಯದ ವೈದ್ಯರ ತಂಡವು ಮರಣೋತ್ತರ ಪರೀಕ್ಷೆ ನಡೆಸಲಿದ್ದು, ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದಿದ್ದಾರೆ.