ನವದೆಹಲಿ: ಕಳೆದ 24 ಗಂಟೆಗಳಲ್ಲಿ ಈವರೆಗೆ ಅತಿ ಹೆಚ್ಚು ಕೇಸ್ಗಳು ಎಂಬಂತೆ ದೇಶದಲ್ಲಿ ಬರೋಬ್ಬರಿ 97,570 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 46 ಲಕ್ಷ ಗಡಿ ದಾಟಿದೆ.
ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 97,570 ಸೋಂಕಿತರು ಪತ್ತೆಯಾಗಿದ್ದು, 1,201 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 46,59,985 ಹಾಗೂ ಮೃತರ ಸಂಖ್ಯೆ 77,472ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 36,24,197 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 9,58,316 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ತಮಿಳುನಾಡಿನಲ್ಲಿ ಒಟ್ಟು 48,482 ಸಕ್ರಿಯ ಪ್ರಕರಣಗಳಿದ್ದು, 8,154 ಸಾವುಗಳು ಸಂಭವಿಸಿವೆ. ಮತ್ತೊಂದೆಡೆ ಕರ್ನಾಟಕದಲ್ಲಿ 1,01,556 ಸಕ್ರಿಯ ಪ್ರಕರಣಗಳಿದ್ದು, ಇಲ್ಲಿಯವರೆಗೆ 6,937 ಸಾವುಗಳು ಸಂಭವಿಸಿವೆ. ದೆಹಲಿಯಲ್ಲಿ ಒಟ್ಟು 25, 416 ಸಕ್ರಿಯ ಪ್ರಕರಣಗಳು ಮತ್ತು ವೈರಸ್‌ನಿಂದ 4,666 ಸಾವುಗಳು ಸಂಭವಿಸಿವೆ.
ಭಾರತದಲ್ಲಿ ವರದಿಯಾದ ಒಟ್ಟು ಕೋವಿಡ್-19 ಪ್ರಕರಣಗಳಲ್ಲಿ ನಾಲ್ಕರಲ್ಲಿ ಮೂರು ಭಾಗದಷ್ಟು ಚೇತರಿಸಿಕೊಂಡಿದ್ದಾರೆ ಅಥವಾ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವಾಲಯವು, ದೇಶದಲ್ಲಿ ಚೇತರಿಕೆಯ ಪ್ರಮಾಣವನ್ನು ಶೇ. 77.65 ಎಂದು ತೋರಿಸಿರುವ ಚಿತ್ರವನ್ನು ಹಂಚಿಕೊಂಡಿದ್ದು, ಸಕ್ರಿಯ ಪ್ರಕರಣಗಳು ಶೇ. 20.7ರಷ್ಟಿದೆ ಎಂದಿದೆ.