ವಾಷಿಂಗ್ಟನ್: ಕೆಲದಿನಗಳಿಂದ ಅಮೆರಿಕದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆಯೇ ಮುಂದುವರೆದರೆ ಕೋವಿಡ್-19 ಅಟ್ಟಹಾಸಕ್ಕೆ ಸುಮಾರು ಒಂದು ಲಕ್ಷದಿಂದ ಎರಡು ಲಕ್ಷ ಮಂದಿ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಶ್ವೇತಭವನ ಎಚ್ಚರಿಕೆ ನೀಡಿದೆ.
ಕೋವಿಡ್-19 ಬೇಗ ಹರಡುತ್ತಿದ್ದು, ಇಂತಹ ಭೀಕರ ಸನ್ನಿವೇಶ ಸೃಷ್ಟಿಯಾಗಲು ನಾವು ಬಿಡಬಾರದು ಎಂದು ಅಮೆರಿಕದ ಖ್ಯಾತ ವೈದ್ಯ ಅಂಥೋನಿ ಫೌಸಿ ಶ್ವೇತಭವನದ ರೋಸ್ ಗಾರ್ಡನ್ನಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ ಅಮೆರಿಕನ್ನರು ಕೊರೊನಾ ಕುರಿತು ಭಯಪಡುವ ಅಗತ್ಯ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ನಿಯಂತ್ರಣಕ್ಕೆ ಬಾರದ ಕೋವಿಡ್-19: ಏ.30 ವರೆಗೂ ಸಾಮಾಜಿಕ ಅಂತರ ಕಡ್ಡಾಯ
ಇದೇ ವೇಳೆ ಮಾತನಾಡಿದ ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಖರವಾದ ಅಧ್ಯಯನವೊಂದು ಕೊರೊನಾ ಉಪಟಳದಿಂದಾಗುವ ಅನಾಹುತಗಳನ್ನು ಅಂದಾಜು ಮಾಡಿದೆ. ಈಗಾಗಲೇ 2,300 ಮಂದಿ ಸಾವನ್ನಪ್ಪಿದ್ದಾರೆ. ಸರ್ಕಾರವೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನರ ರಕ್ಷಣೆಗಾಗಿ ಅಗತ್ಯ ಕಾನೂನುಗಳನ್ನು ರೂಪಿಸುತ್ತಿದೆ. ಸಾರ್ವಜನಿಕರು ಅದನ್ನು ಪಾಲಿಸಬೇಕೆಂದು ಮನವಿ ಮಾಡಿದರು.
ಈಗಿರುವ ಸಾಮಾಜಿಕ ಅಂತರದ ನಿಯಮವನ್ನು ಏಪ್ರಿಲ್ 30ರವರೆಗೆ ವಿಸ್ತರಿಸಲಾಗಿದ್ದು, ಜನರು ಸಹಕರಿಸಬೇಕಕು. ಜೂನ್ 1ರಿಂದ ಅಮೆರಿಕ ಕೊರೊನಾದಿಂದ ಸುಧಾರಿಸಿಕೊಳ್ಳುತ್ತದೆ ಎಂದು ಭರವಸೆ ನೀಡಿದರು.
ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರಿರುವ ರಾಷ್ಟ್ರ ಅಮೆರಿಕ ಆಗಿದ್ದು, ನ್ಯೂಯಾರ್ಕ್ ನಗರವೊಂದರಲ್ಲೇ ಸಾವಿರಕ್ಕೂ ಅಧಿಕ ಮಂದಿ ಮರಣ ಹೊಂದಿದ್ದಾರೆ. ಇದರಿಂದಾಗಿ ತೀವ್ರ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.