ಹೈದರಾಬಾದ್:ಪ್ರಿಯಕನನೊಂದಿಗೆ ಬಾಲಕಿ ಮದುವೆಗೆ ಪೋಷಕರು ಒಪ್ಪಿಗೆ ನೀಡಿದ್ರೂ ಪ್ರಯೋಜನವಾಗಲಿಲ್ಲ. ಮದುವೆಗೆ ಎರಡು ವರ್ಷ ಕಾಯಿರಿ ಎಂದಿದ್ದಕ್ಕೆ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಸ್ಥಳೀಯ ಶಾಲೆಯೊಂದರಲ್ಲಿ ಬಾಲಕಿ (16) 10ನೇ ತರಗತಿ ಓದುತ್ತಿದ್ದರು. ಕೆಲ ಕಾಲದಿಂದಲೂ ಬಾಲಕಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆತನೊಂದಿಗೆ ನನ್ನ ಮದುವೆ ಮಾಡಿಸಿ ಎಂದು ತಂದೆ - ತಾಯಿಯನ್ನು ಕೇಳಿದ್ದಾಳೆ. ಮೈನರ್ ಆಗಿರುವುದರಿಂದ ಮೇಜರ್ ಆದ್ಮೇಲೆ ಮದುವೆ ಮಾಡಿಸುವುದಾಗಿ ಪೋಷಕರು ಬಾಲಕಿಗೆ ಹೇಳಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಬಾಲಕಿ ಖಾಜಿಯನ್ನು ಭೇಟಿ ಮಾಡಿದ್ದಾರೆ. ಖಾಜಿಯೂ ಸಹ ಪೋಷಕರು ಹೇಳಿದಂತೆ ನಡೆದುಕೊಳ್ಳಲು ಸೂಚಿಸಿದ್ದಾರೆ. ಇದರಿಂದ ಮನಸ್ತಾಪಕ್ಕೆ ಗುರಿಯಾದ ಬಾಲಕಿ ಬುಧವಾರ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಇನ್ನು ಬಾಲಕಿ ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದಾಳೆ. ‘ಎರಡು ವರ್ಷಗಳ ಬಳಿಕ ಪರಿಸ್ಥಿತಿ ಹೇಗಿರುತ್ತೋ ಗೊತ್ತಿಲ್ಲ. ನಾನು ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗುತ್ತೋ, ಇಲ್ಲವೋ ತಿಳಿಯುತ್ತಿಲ್ಲ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಸಾರಿ ಡ್ಯಾಡಿ... ಸಾರಿ ಮಮ್ಮಿ... ಎಂದು ಡೆತ್ನೋಟ್ನಲ್ಲಿ ಬರೆದಿದ್ದಾರೆ.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.