ಶಿಮ್ಲಾ:ಹಿಮಪಾತದಿಂದಾಗಿ ಹಿಮಾಚಲ ಪ್ರದೇಶದಲ್ಲಿನ ವಿವಿಧ ಭಾಗಗಳಲ್ಲಿ ಸುಮಾರು 800 ರಸ್ತೆಗಳಲ್ಲಿ ಇನ್ನೂ ಸಂಚಾರ ಸ್ಥಗಿತವಾಗಿದ್ದು, ಜನವರಿ 13 ಮತ್ತು 16 ರಂದು ಭಾರಿ ಮಳೆ ಹಾಗೂ ಹಿಮಪಾತವಾಗಲಿದೆ ಎಂದು ಭಾರತ ಹವಾಮಾನ ಇಲಾಖೆ ಆರೆಂಜ್ ಎಚ್ಚರಿಕೆ ನೀಡಿದೆ.
ಶಿಮ್ಲಾದಲ್ಲೇ 642 ರಸ್ತೆಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 835 ರಸ್ತೆಗಳು ಹಿಮಾವೃತವಾಗಿದ್ದು, 440 ಯಂತ್ರಗಳು ಹಿಮ ತೆರವು ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (SDMA) ತಿಳಿಸಿದೆ. ರಾಜ್ಯದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ಶಿಮ್ಲಾದಲ್ಲಿ ಶುಕ್ರವಾರ ಹಿಮದಿಂದಾವೃತವಾದ ರಸ್ತೆಯಿಂದ ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.
ಹಾನಿ, ವ್ಯಾಪಕ ಅಡ್ಡಿ ಅಥವಾ ಜೀವಕ್ಕೆ ಅಪಾಯವನ್ನು ಉಂಟುಮಾಡುವ ಸಾಮರ್ಥ್ಯವಿರುವ ಅಪಾಯಕಾರಿ ಹವಾಮಾನದ ಕುರಿತು ಸಾರ್ವಜನಿಕರನ್ನು ಎಚ್ಚರಿಸಲು ಬಣ್ಣ-ಕೋಡೆಡ್ ಎಚ್ಚರಿಕೆಗಳನ್ನು ಹವಾಮಾನ ಇಲಾಖೆ ನೀಡುತ್ತವೆ. ಕಿತ್ತಳೆ ಬಣ್ಣವು, ಹವಾಮಾನದಿಂದಾಗಿ ಗಮನಾರ್ಹ ಪರಿಣಾಮ ಬೀರಲಿದೆ ಎಂಬ ಎಚ್ಚರಿಕೆಯನ್ನು ನೀಡುತ್ತದೆ.
ಶಿಮ್ಲಾ ಜಿಲ್ಲೆಯ ಕುಫ್ರಿ ಹಾಗೂ ಕುಲು ಜಿಲ್ಲೆಯ ಮನಾಲಿ ಸೇರಿದಂತೆ ರಾಜ್ಯದ ಅನೇಕ ಭಾಗಗಳು ಉಪ-ಶೂನ್ಯ ತಾಪಮಾನಕ್ಕೆ ಸಾಕ್ಷಿಯಾಗಿವೆ. ಮನಾಲಿಯಲ್ಲಿ ಮೈನಸ್ 7.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಿದ್ದು, ಲಾಹೌಲ್ ಮತ್ತು ಸ್ಪಿಟಿ ಜಿಲ್ಲೆಯ ಆಡಳಿತ ಕೇಂದ್ರವಾದ ಕೀಲಾಂಗ್‌ನಲ್ಲಿ ಅತಿ ಕಡಿಮೆ ತಾಪಮಾನ ಮೈನಸ್ 14.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಇನ್ನು ಜನವರಿ 13 ರಂದು ಹಿಮಾಚಲ ಪ್ರದೇಶ ಸೇರಿ ಜಮ್ಮು-ಕಾಶ್ಮೀರ, ಉತ್ತರಾಖಂಡ್, ದೆಹಲಿ, ಪಂಜಾಬ್, ಹರಿಯಾಣ ರಾಜ್ಯಗಳ ಕೆಲ ಭಾಗಗಳಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತ ಹಾಗೂ ಮಳೆಯಾಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.