ನವದೆಹಲಿ/ಬೀಜಿಂಗ್: ಭಾರತ-ಚೀನಾ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆ ಅಕ್ಟೋಬರ್ 11ರಿಂದ 13ರವರೆಗೆ ಚೆನ್ನೈನ ಮಹಾಬಲಿಪುರಂನಲ್ಲಿ ನಡೆಯಲಿದೆ ಎಂಬ ಮಾಹಿತಿ ಇದೆ. ಆದರೆ ಈ ಬಗ್ಗೆ ಉಭಯ ದೇಶಗಳು ದೃಢಪಡಿಸಿಲ್ಲ. ಕಾಶ್ಮೀರ ವಿಚಾರದಲ್ಲಿ ಚೀನಾ ವರ್ತನೆ ಬಗ್ಗೆ ಭಾರತಕ್ಕೆ ಅಸಮಾಧಾನವಿದೆ.
ಆಗಸ್ಟ್ 11ರಿಂದ 13ರವರೆಗೆ ಚೀನಾ ಪ್ರವಾಸ ಕೈಗೊಂಡಿದ್ದ ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್, ಗಡಿ ವಿಚಾರದಲ್ಲಿ ಉಭಯ ದೇಶಗಳ ಭಿನ್ನಾಭಿಪ್ರಾಯದ ಬಗ್ಗೆ ಚರ್ಚೆ ನಡೆಸಿದ್ದರು. ಭಾರತ ತನ್ನ ಭೂಪ್ರದೇಶದ ಬಗ್ಗೆ ವಾದ ಮಂಡಿಸುತ್ತಿದ್ದೆಯೇ ಹೊರತು ಹೆಚ್ಚಿನದನ್ನು ಅಪೇಕ್ಷಿಸುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.
2018ರಲ್ಲಿ ಚೀನಾದ ವುಹಾನ್ನಲ್ಲಿ ಭಾರತ- ಚೀನಾ ಮೊದಲನೇ ಅನೌಪಚರಿಕ ಶೃಂಗಸಭೆ ನಡೆದಿತ್ತು. ಈ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ- ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಆರು ಸುತ್ತಿನ ಮಾತುಕತೆ ನಡೆಸಿದ್ದರು. ಉಭಯ ದೇಶಗಳ ನಡುವಿನ ಗಡಿ ಮತ್ತಿತರ ಸಮಸ್ಯೆ, ಜಾಗತಿಕ ಸ್ಥಾನಮಾನದ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಈ ಶೃಂಗಸಭೆ ವಿಶ್ವಮಟ್ಟದಲ್ಲಿ ಭಾರಿ ಗಮನ ಸೆಳೆದಿತ್ತು. ಭಾರತ ಹಾಗೂ ಚೀನಾ ಜಾಗತಿಕ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಮುಖ ರಾಷ್ಟ್ರಗಳಾಗಿವೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೇಳಿದ್ದರು.
ಸಹಕಾರ ಒಕ್ಕೂಟವನ್ನು ಮತ್ತಷ್ಟು ಬಲಪಡಿಸುವುದಾಗಿ ಶೃಂಗಸಭೆ ಮುಕ್ತಾಯದ ಬಳಿಕ ಜಂಟಿ ಪ್ರಕಟಣೆಯಲ್ಲಿ ಉಭಯ ದೇಶಗಳು ಹೇಳಿಕೊಂಡಿದ್ದವು. ಭಿನ್ನಾಭಿಪ್ರಾಯವನ್ನು ಶಾಂತಿ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ತೀರ್ಮಾನಕ್ಕೆ ಬರಲಾಗಿತ್ತು.