ಕಾಸರಗೋಡು:ಮಕ್ಕಳ ಸಂತೋಷಕ್ಕೋಸ್ಕರ ಹೆತ್ತವರು ಎಷ್ಟೆಲ್ಲ ತ್ಯಾಗ ಮಾಡ್ತಾರೆ. ಮಕ್ಕಳ ನಗುವಿನಲ್ಲೇ ತಮ್ಮ ಜೀವನದ ಖುಷಿಯನ್ನು ಕಂಡುಕೊಳ್ತಾರೆ. ಅದೇ ರೀತಿ ಇಲ್ಲೊಬ್ಬ ತಂದೆ ಕೈಗಳು ಸ್ವಾಧೀನವಿಲ್ಲದ ತಮ್ಮ ವಿಕಲಚೇತನ ಮಗಳಿಗಾಗಿ ಪೆಡಲ್ ಮೂಲಕ ಚಲಿಸಬಲ್ಲ ಆಟೋ ರಿಕ್ಷಾವನ್ನೇ ಕಂಡು ಹಿಡಿದಿದ್ದಾರೆ.
ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿರುವ ಸುರೇಶ್ ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಚೆಮ್ಮಟಮ್ನ ನಿವಾಸಿ. ಇವರ ಮಗಳು ಸ್ನೇಹ ತನ್ನ ಎರಡೂ ಕೈಗಳು ಸ್ವಾಧೀನ ಕಳೆದುಕೊಂಡು ಅಂಗವೈಲ್ಯಕ್ಕೆ ಒಳಗಾಗಿದ್ದಾಳೆ. ಕೊರೊನಾ ಬಿಕ್ಕಟ್ಟು ಎದುರಾಗುವ ಮೊದಲು ನಿತ್ಯ ಬೆಳಗ್ಗೆ ತಮ್ಮ ಮಗಳನ್ನು ಆಟೋದಲ್ಲಿ ಕೂರಿಸಿಕೊಂಡು ಅಪ್ಪ - ಮಗಳು ಜಾಲಿರೈಡ್ ಹೋಗುತ್ತಿದ್ರು.
ಆದರೆ, ಕೋವಿಡ್ ಹಿನ್ನೆಲೆ ಲಾಕ್ಡೌನ್ ಹೇರಿದ ಪರಿಣಾಮ ಆಟೋ ಸಂಚಾರ ಸ್ತಬ್ಧಗೊಂಡು ಮನೆಯಲ್ಲೇ ಕೂರುವಂತಾಯ್ತು. ಇತ್ತ ಮಗಳನ್ನು ಆಟೋದಲ್ಲಿ ಹೊರಗೆ ಕರೆದುಕೊಂಡ ಹೋಗಲಾರದ ಸ್ಥಿತಿ ಬಂದಿದ್ದಕ್ಕೆ ಸಹಜವಾಗಿ ತಂದೆ ಸುರೇಶ್ಗೆ ಬೇಸರವಾಯ್ತು. ಈ ವೇಳೆ, ಹೇಗಾದರೂ ಮಾಡಿ ಮಗಳನ್ನು ಮತ್ತೆ ಖುಷಿ ಪಡಿಸಲು ಪರ್ಯಾಯ ಯೋಚನೆ ಮಾಡಿದ ಸುರೇಶ್ಗೆ ತಲೆಯಲ್ಲಿ ಹೊಸ ಐಡಿಯಾ ಒಂದು ಬಂತು.
ಮಗಳಿಗೆ ಕೈ ಸ್ವಾಧೀನವಿಲ್ಲ. ಆದರೆ, ಕಾಲುಗಳು ಕೆಲಸ ಮಾಡುತ್ತೇವೆ, ನಾನು ಪೆಡಲ್ ಮೂಲಕ ಚಲಿಸುವ ಆಟೋ ಕಂಡು ಹಿಡಿದ್ರೆ, ಮಗಳು ತಾನಾಗೇ ಪೆಡಲ್ ತುಳಿದುಕೊಂಡು ರಿಕ್ಷಾ ಸವಾರಿ ಮಾಡಬಲ್ಲಳು ಎಂದು ಯೋಚಿಸಿದ್ರು. ನಂತರ ತಡ ಮಾಡದೇ ಕಾರ್ಯಪ್ರವೃತ್ತರಾಗಿ ಈ ಮೂರು ಚಕ್ರದ ಪೆಡಲ್ ಮೂಲಕ ಚಲಿಸುವ ಆಟೋರಿಕ್ಷಾ ವಿನ್ಯಾಸಗೊಳಿಸಿಯೇ ಬಿಟ್ರು.
ಮೊದಲೇ ಆಟೋಮೊಬೈಲ್ ಕ್ಷೇತ್ರದಲ್ಲಿ ಹಾಗೂ ಕಾರ್ಪೆಂಟರ್ ಕೆಲಸ ಮಾಡಿದ ಅನುಭವ ಹೊಂದಿದ್ದ ಸುರೇಶ್, ಲಾಕ್ಡೌನ್ನಿಂದ ಹೊರ ಹೋಗಲಾಗದೇ ಖಿನ್ನತೆಗೊಳಗಾಗಿದ್ದ ಮಗಳು ಸ್ನೇಹಾಳಿಗಾಗಿ ಈ ಹೊಸ ರೀತಿಯ ಆಟೋ ಗಿಫ್ಟ್ ನೀಡುವ ಮೂಲಕ ಮಗಳು ಕಳೆದುಕೊಂಡಿದ್ದ ಖುಷಿ ಮರಳಿ ನೀಡಿದ್ದಾರೆ.
ಇನ್ನು ಈ ಪೆಡಾಲ್ ಆಟೋರಿಕ್ಷಾ ತಯಾರಿಸಲು ಫೋಮ್ ಶೀಟ್, ಪ್ಲೈವುಡ್, ಕಬ್ಬಿಣದ ಕೊಳವೆಗಳು, ಸೈಕಲ್ ಪೆಡಲ್ಗಳು, ಚಕ್ರಗಳು, ಮರದ ತುಂಡುಗಳು ಮತ್ತು ಪ್ಲಾಸ್ಟಿಕ್ ಹಾಳೆ ಬಳಸಿದ್ದಾರೆ. ಈ ರಿಕ್ಷಾ ತಯಾರಿಸಲು ಒಂದೂವರೆ ತಿಂಗಳು ಸಮಯ ಹಿಡಿದಿದೆ. ಮೊದಲು ಈ ಆಟೋವನ್ನು ಮನೆಯ ಆವರಣದಲ್ಲಿ ಮಗಳು ಓಡಾಡಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲು ಸುರೇಶ್ ಯೋಜಿಸಿದ್ರು.
ಆದರೆ, ಈಗ ಅದರಲ್ಲಿ ರಸ್ತೆಯಲ್ಲಿ ಕೂಡ ಹೋಗಬಹುದು ಅಂತಾರೆ ಈ ತಂದೆ. ಇನ್ನು ಈ ಆಟೋಗೆ ‘ಸ್ನೇಹಮೋಲ್’ಎಂದು ಹೆಸರಿಟ್ಟಿದ್ದು, ಸುರೇಶ್ ಅವರ ನಿಜವಾದ ಆಟೋ ರಿಕ್ಷಾಗೆ ಈ ಆಟೋ ಸೈಡ್ ಹೊಡೆಯುವಂತೆ ಕಾಣುತ್ತಿದೆ ಎಂದು ತಂದೆ ಸುರೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ಈಗ, ಸುರೇಶ್ ಮಗಳು ಸ್ನೇಹಾ ಅಷ್ಟೇ ಅಲ್ಲ, ಅವರ ಪತ್ನಿ ಸರಿತಾ ಕೂಡ ತಮ್ಮ ಮಗಳನ್ನು ಯಾವುದೇ ಸಮಯದಲ್ಲಿ ಅಂಗಳದಲ್ಲಿ ನಿಂತಿರುವ ‘ಸ್ನೇಹಮೋಲ್’ ಆಟೋರಿಕ್ಷಾದಲ್ಲಿ ಜಾಯ್ ರೈಡ್ಗೆ ಹೋಗಬಹುದು.