ನವದೆಹಲಿ: 2021ನೇ ಸಾಲಿನ ಇಂಡಿಯಾ ಜಸ್ಟಿಸ್ ರಿಪೋರ್ಟ್ ಬಿಡುಗಡೆಯಾಗಿದೆ. ದೇಶದ ಆಡಳಿತದ ನಾಲ್ಕು ಪ್ರಮುಖ ಅಂಗಗಳಾದ ನ್ಯಾಯಾಂಗ, ಪೊಲೀಸ್, ಜೈಲು ಹಾಗೂ ಕಾನೂನು ಸಹಾಯಗಳನ್ನು ಆಧರಿಸಿ ದೇಶದ ಆಯಾ ರಾಜ್ಯಗಳು ಸಾಧಿಸಿರುವ ಪ್ರಗತಿಯನ್ನು ಈ ವರದಿ ಬಿಂಬಿಸುತ್ತದೆ.
ಟಾಟಾ ಟ್ರಸ್ಟ್ ನೇತೃತ್ವದಲ್ಲಿ ಸೆಂಟರ್ ಫಾರ್ ಸೋಶಿಯಲ್ ಜಸ್ಟಿಸ್, ಕಾಮನ್ ಕಾಸ್, ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್, ದಕ್ಷ, ಟಿಐಎಸ್ಎಸ್-ಪ್ಯಾಸ್, ವಿಧಿ ಸೆಂಟರ್ ಈ ಎಲ್ಲ ಸಂಘಟನೆಗಳು ಸೇರಿಕೊಂಡು ಅಧ್ಯಯನಾತ್ಮಕ ಇಂಡಿಯಾ ಜಸ್ಟಿಸ್ ರಿಪೋರ್ಟ್ ತಯಾರಿಸುತ್ತವೆ.
2021ರಲ್ಲಿ ದೇಶದ ರಾಜ್ಯಗಳು ಸಂತ್ರಸ್ತರಿಗೆ ಕಾನೂನು ನೆರವು ನೀಡುವಲ್ಲಿ ಯಾವ ರೀತಿಯ ಪ್ರಗತಿಯನ್ನು ಸಾಧಿಸಿವೆ ಎಂಬುದರ ಕುರಿತಾದ ಇಂಡಿಯಾ ಜಸ್ಟಿಸ್ ರಿಪೋರ್ಟ್-ಲೀಗಲ್ ಏಡ್ ವರದಿಯ ಪ್ರಮುಖಾಂಶಗಳು ಇಲ್ಲಿವೆ:
ಕಾನೂನು ನೆರವು: ರಾಜ್ಯವಾರು ಅಂಕಿ-ಸಂಖ್ಯೆಗಳು
- ದೇಶದ 36 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಒಂದೇ ಒಂದು ರಾಜ್ಯವೂ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ನೀಡಿದ್ದ ಸಂಪೂರ್ಣ ಬಜೆಟ್ ಅನುದಾನವನ್ನು ವಿನಿಯೋಗ ಮಾಡಿಲ್ಲ.
- 36 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ 21 ರಾಜ್ಯಗಳು ಮೀಸಲಾದ ಶೇ 50 ರಷ್ಟು ಬಜೆಟ್ ಖರ್ಚು ಮಾಡಿವೆ.
- ಕಾನೂನು ನೆರವು ಪ್ರಾಧಿಕಾರಗಳಲ್ಲಿ 21 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಶೇ 20 ರಷ್ಟು ಮಹಿಳಾ ವಕೀಲರನ್ನು ನೇಮಿಸಿವೆ.
- 32 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ 5 ರಾಜ್ಯಗಳಲ್ಲಿ ಕೇವಲ 6 ಅಥವಾ ಅದಕ್ಕೂ ಕಡಿಮೆ ಸಂಖ್ಯೆಯ ಹಳ್ಳಿಗಳಲ್ಲಿ ಕಾನೂನು ನೆರವು ಕೇಂದ್ರಗಳಿವೆ.
- 36 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ 15 ರಾಜ್ಯಗಳಲ್ಲಿ ಲೋಕ್ ಅದಾಲತ್ಗಳ ಮೂಲಕ ಶೇ 50ರಷ್ಟು ವ್ಯಾಜ್ಯ-ಪೂರ್ವ ಪ್ರಕರಣಗಳನ್ನು ಬಗೆಹರಿಸಲಾಗಿದೆ.
- 2019-20ನೇ ಸಾಲಿನಲ್ಲಿ ದೇಶದ ಪ್ರತಿ ಪ್ರಜೆಗೆ ಕೇಂದ್ರ ಸರ್ಕಾರವು ಕಾನೂನು ನೆರವಿಗಾಗಿ 1.05 ರೂಪಾಯಿ ಖರ್ಚು ಮಾಡಿದೆ.
ಕಾನೂನು ನೆರವಿಗಾಗಿ ಲಭ್ಯವಿರುವ ಮಾನವ ಸಂಪನ್ಮೂಲ
2020 ರ ಮಾರ್ಚ್ನಲ್ಲಿರುವಂತೆ, ದೇಶದಲ್ಲಿ 669 ಜಿಲ್ಲಾ ಕಾನೂನು ನೆರವು ಪ್ರಾಧಿಕಾರಗಳಿವೆ. ಜಿಲ್ಲಾ ಕಾನೂನು ಪ್ರಾಧಿಕಾರಗಳಿಗೆ 629 ಕಾರ್ಯದರ್ಶಿ ಹುದ್ದೆಗಳನ್ನು ಮಂಜೂರು ಮಾಡಿದ್ದು, ಇದು ಅಗತ್ಯಕ್ಕಿಂತ 40 ಹುದ್ದೆ ಕೊರತೆಯಾಗಿದೆ.
ಈ ಕಾನೂನು ಪ್ರಾಧಿಕಾರಗಳಲ್ಲಿ 573 ಜನ ಪೂರ್ಣಾವಧಿಯ ಕಾರ್ಯದರ್ಶಿಗಳ ನೇಮಕವಾಗಿದ್ದು, 96 ಜನ ಸಿಬ್ಬಂದಿ ಕೊರತೆಯಿದೆ.