ಕೊರೊನಾ ಸೋಂಕಿನ ಕಾರಕ್ಕಾಗಿ ಇಂದು ತಾಯಿ ಭಾರತಿ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಆಕೆಯ ಮಕ್ಕಳ ನಡುವಣ ಕರುಳ ಬಳ್ಳಿಯ ಸಂಬಂಧ ಹಿಂದೆಂದೂ ಎದುರಾಗದ ಅತ್ಯಂತ ಕ್ಲಿಷ್ಟಕರ ಸವಾಲಿಗೆ ಸಿಲುಕಿದೆ. ವಿಶ್ವವನ್ನೇ ಅದರಲ್ಲೂ ಮುಖ್ಯವಾಗಿ ಭಾರತೀಯ ವಲಸಿಗರು ಸೇವೆ ಸಲ್ಲಿಸಿ ಅಭಿವೃದ್ಧಿ ಹೊಂದಿದ ಎಲ್ಲಾ ರಾಷ್ಟ್ರಗಳು ಇಂದು ಕೊರೊನಾ ವೈರಸ್‍ನ ಭೀತಿಗೆ ಒಳಗಾಗಿವೆ.
ಒಂದೊಮ್ಮೆ ವಿದೇಶಗಳಲ್ಲಿ ಚದುರಿದಂತೆ ನೆಲೆಸಿರುವ ಸುಮಾರು 3 ಕೋಟಿ ಅನಿವಾಸಿ ಭಾರತೀಯರು, ಭಾರತ ಸರಕಾರದ ನೆರವನ್ನು ಈ ಸಂದರ್ಭದಲ್ಲಿ ಅಪೇಕ್ಷಿಸಿದರೆ ಈವರೆಗಿನ ಸ್ವೀಕರಿಸುವ ದೇಶವಾಗಿ ಭಾರತ ಹಾಗೂ ನೆರವು ನೀಡುವ ಅನಿವಾಸಿ ಭಾರತೀಯರ ಪಾತ್ರಗಳು ಖಂಡಿತಾ ಬದಲಾಗಲಿದೆ. ನಿಜವಾದ ಭೀತಿಯೆಂದರೆ, ಕೊರೊನಾ ವೈರಸ್ ಕಾರಣಕ್ಕಾಗಿ ವಿದೇಶಗಳಲ್ಲಿ ನೆಲೆನಿಂತಿರುವ ಭಾರತೀಯರ ಜೀವ ಹಾನಿ. ಇದು ನೋವು ಮತ್ತು ದೊಡ್ಡ ಮಟ್ಟದ ಹಾನಿಗೆ ಕಾರಣವಾಗಲಿದೆ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಹಿಡಿಯದಿದ್ದರೆ, ಹಾಗೂ ಜಾಗತಿಕ ಆರ್ಥಿಕತೆ ಚೇತರಿಸಿಕೊಳ್ಳದಿದ್ದರೆ, ಬಾರತದ ಮೇಲೆ ಅತಿ ದೊಡ್ಡ ಭಾರವೊಂದು ಬೀಳುವ ಸಾಧ್ಯತೆ ಇದೆ.
ವಿಶ್ವದೆಲ್ಲೆಡೆ ಹೆಚ್ಚು ಪ್ರಬಲವಾಗುತ್ತಿರುವ ರಾಷ್ಟ್ರೀಯತೆಯ ಪರಿಕಲ್ಪನೆ ಹಾಗೂ ಕುಗ್ಗುತ್ತಿರುವ ಅಂತಾರಾಷ್ಟ್ರೀಯ ಸಹಕಾರದ ಕಾರಣಗಳಿಂದಾಗಿ ಭಾರತ ಬಾಹ್ಯ ಸಹಕಾರವನ್ನು ಹೆಚ್ಚು ಅವಲಂಬಿಸಲು ಸಾಧ್ಯವಿಲ್ಲ. ಚೀನಾದ ಅಹಂಕಾರದ ಕಾರಣಕ್ಕಾಗಿ ವಿಶ್ವಸಂಸ್ಥೆ ಸ್ವತ: ದುರ್ಬಲಗೊಂಡಿದೆ. ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರ ಅತಿ ರಾಷ್ಟ್ರೀಯವಾದದ ಕಡು ಟೀಕಾಕಾರರಾಗಿದ್ದ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳು ಈಗ ಸ್ವತ: ಅಂತರ್ಮುಖಿಯಾಗುತ್ತಿದ್ದು, ಪ್ರತಿ ದೇಶವೂ ಒಬ್ಬಂಟಿಯಾಗಿ ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸುವಂತಾಗಿದೆ. ಸಾರ್ಕ್, ಜಿ-20, ಜಿ-7 ರಾಷ್ಟ್ರಗಳ ನಡುವಣ ವರ್ಚುವಲ್ ಸಭೆಗಳು ಕೋವಿಡ್19ನ್ನು ಜತೆಯಾಗಿ ಹೋರಾಡುವ ಸಂಬಂಧ ಯಾವುದೇ ಫಲಪ್ರದ ನೀಡಿಲ್ಲ.
ಸೂರ್ಯ ಮುಳುಗದ ರೀತಿಯಲ್ಲಿ ವಿಶ್ವದಾದ್ಯಂತ ಹರಡಿರುವ ತನ್ನ ಅನಿವಾಸಿ ಪ್ರಜೆಗಳ ಬಗ್ಗೆ ಹೆಮ್ಮೆ ಹೊಂದಿರುವ ಭಾರತಕ್ಕೆ ಈ ಕೋವಿಡ್ 19 ಮಹಾಮಾರಿ, ತನ್ನ ಹಳೆಯ ಸವಾಲಿನ ದಿನಗಳನ್ನು ನೆನಪಿಸುತ್ತಿದೆ. ತಮ್ಮ ಹೆಮ್ಮೆ, ಸಂಪತ್ತು ಹಾಗೂ ಜವಾಬ್ದಾರಿಗಳಿಂದ ಸ್ವಯಂ ಕುಸಿದ ಹಳೆಯ ರಾಜ ಮನೆತನಗಳ ದಿನಗಳನ್ನು ನೆನಪಿಸುತ್ತಿದೆ. ಅನಿವಾಸಿ ಭಾರತೀಯರು, ಭಾರತದ ಪಾಲಿಗೆ ಸಂಪತ್ತು, ತಂತ್ರಜ್ಞಾನ ಹಾಗೂ ಬೌದ್ದಿಕ ಶ್ರೀಮಂತಿಕೆಯ ಮೂಲಗಳು. ಭಾರತದಲ್ಲಿ ಆರ್ಥಿಕ ಸುಧಾರಣೆಗಳು ಜಾರಿಗೊಂಡ ಬಳಿಕ, ನಮ್ಮ ಆರ್ಥಿಕತೆ ಅತಿ ವೇಗವಾಗಿ ಬೆಳೆಯಲು ಆರಂಭಿಸಿದ ಬಳಿಕ, ಶ್ರೀಮಂತ ದೇಶಗಳಲ್ಲಿರುವ ಅನಿವಾಸಿ ಭಾರತೀಯರು ಹಾಗೂ ಮಧ್ಯಪ್ರಾಚ್ಯದ ವಲಸಿಗರು ದೇಶದ ಆರ್ಥಿಕತೆಯ ಬೆನ್ನೆಲುಬಾದರು.
ಮಧ್ಯಪ್ರಾಚ್ಯದ ಶತಕೋಟ್ಯಾಧೀಶರು ಬ್ರಿಟಿಷ್ ಆಡಳಿತದ ಹೆಮ್ಮೆಗಳಂತಿದ್ದ ಈಸ್ಟ್ ಇಂಡಿಯಾ ಕಂಪನಿ, ಸ್ಕಾಟ್‍ಲ್ಯಾಂಡ್ ಯಾರ್ಡ್ ಸಂಸ್ಥೆಗಳನ್ನು ತಮ್ಮ ಸ್ವಾಧೀನಪಡಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ಬರೆದರು. 3 ಕೋಟಿಗೂ ಅಧಿಕ ಸಂಖ್ಯೆಯಲ್ಲಿರುವ ಅನಿವಾಸಿ ಭಾರತೀಯರ ಒಟ್ಟು ಸಂಪತ್ತು ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ಯನ್ನು ಮೀರಿಸುತ್ತಿದೆ. ಭಾರತ ಅವರ ಬೆಂಬಲ, ಸಹಕಾರವನ್ನು ಅಂತಾರಾಷ್ಟ್ರೀಯ ಆರ್ಥಿಕತೆ ಹಾಗೂ ರಾಜಕೀಯ ವಿಷಯಗಳಲ್ಲಿ ಪಡೆಯುತ್ತಿದೆ.
ಅನಿವಾಸಿ ಭಾರತೀಯರ ಸಂಖ್ಯೆ ಹೆಚ್ಚಳಕ್ಕೆ ಸಂಬಂಧಿಸಿದರೆ, ಅದು ಹಲವಾರು ಅಸಂಘಟಿತ ವಲಸೆ ಅಲೆಗಳ ಪರಿಣಾಮ ಎಂಬುದು ನಮ್ಮ ಗಮನಕ್ಕೆ ತಿಳಿದು ಬರುತ್ತದೆ. ಉತ್ತಮ ಉದ್ಯೋಗ ಹಾಗೂ ಸಂಪತ್ತಿನ ಹುಡುಕಾಟದಲ್ಲಿ ಮುಂದುವರಿದ ದೇಶಗಳಿಗೆ ತೆರಳಿದ ನಾನಾ ವೃತ್ತಿಪರರು ಅತಿ ದೊಡ್ಡ ಸಂಖ್ಯೆಯ ಅನಿವಾಸಿ ಭಾರತೀಯರ ಗುಂಪನ್ನು ಸೃಷ್ಟಿಸಿದ್ದಾರೆ. ಒಂದು ಕಾಲದಲ್ಲಿ ಇದು ಪ್ರತಿಭಾ ಪಲಾಯನ ಎಂದೇ ಇದನ್ನು ಕರೆಯಲಾಗುತ್ತಿತ್ತು. ಆದರೆ ಭಾರತದಲ್ಲಿ ಪ್ರತಿಭಾವಂತರು ದೊಡ್ಡ ಸಂಖ್ಯೆಯಲ್ಲಿರುವುದರಿಂದ ಇದನ್ನು ಪ್ರತಿಭಾ ಕೊಡುಗೆ ಎಂದದರೂ ತಪ್ಪಾಗಲಾರದು. ಅಮೇರಿಕಾ ಸಂಯುಕ್ತ ಸಂಸ್ಥಾನ ವಲಸೆಗೆ ತನ್ನ ದಿಡ್ಡಿ ಬಾಗಿಲು ತೆರೆದ ಬಳಿಕ, ಹಲವಾರು ಪ್ರವಾಸ-ವೀಸಾ ಕಟ್ಟುಪಾಡುಗಳ ಹೊರತಾಗಿಯೂ ಭಾರತದಿಂದ ದೊಡ್ಡ ಸಂಖ್ಯೆಯ ವೃತ್ತಿಪರರು ಆ ದೇಶಕ್ಕೆ ವಲಸೆ ಹೋದರು ಹಾಗೂ ಅಲ್ಪಾವಧಿಯಲ್ಲಿಯೇ ಶ್ರೀಮಂತರಾದರು. ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಅಮೇರಿಕಾದಲ್ಲಿ ಬಾರತೀಯರ ಸಂಖ್ಯೆ ಕೂಡಾ ದೊಡ್ಡ ಮಟ್ಟದಲ್ಲಿ ಹೆಚ್ಚಳಕಂಡಿತು ಜತೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹುತೇಕ ಏಕಸ್ವಾಮ್ಯತ್ವ ಹೊಂದಿದೆ. ಈ ವಲಸೆಗಳಾವವೂ ದೇಶದ ರಾಷ್ಟ್ರೀಯ ಕಾರ್ಯ ಯೋಜನೆ ಪ್ರಕಾರ ನಡೆದುದಲ್ಲ. ಈ ವಲಸೆ ಯಾವುದೇ ದತ್ತಾಂಶಗಳನ್ನು ಹೊಂದದೆಯೂ ಹೆಚ್ಚಳಗೊಂಡಿತು. ವಲಸಿಗರ ಪೈಕಿ ಒಂದು ಚಿಕ್ಕ ಸಂಖ್ಯೆಯ ಜನ ಮಾತ್ರ ಸ್ಥಳೀಯ ಭಾರತೀಯ ಕಚೇರಿಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಕೌಶಲ್ಯಯುತ ಹಾಗೂ ಅರೆ ಕೌಶಲ್ಯಯುತ ಉದ್ಯೋಗಿಗಳಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ಯೋಗ ಅವಕಾಶ ಸೃಷ್ಟಿಯಾದದ್ದು ಕೂಡಾ ಯಾವುದೇ ಯೋಜನೆಗಳಿಲ್ಲದೆ ಹಾಗೂ ಅನಿರೀಕ್ಷಿತವಾಗಿ. ವೈಯಕ್ತಿಕ ಉದ್ಯಮಶೀಲತೆಯಿಂದ ಮಧ್ಯಪ್ರಾಚ್ಯ ಭಾಗದಲ್ಲಿ ಕೂಡಾ ಭಾರತೀಯರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಿತು. ಕೆಲ ಮಧ್ಯವರ್ತಿಗಳು ಉದ್ಯೋಗಿಗಳನ್ನು ಶೋಷಣೆಗೊಳಪಡಿಸಿದರು. ಆದರೆ ಬಹುತೇಕ ಮಧ್ಯಪ್ರಾಚ್ಯಕ್ಕೆ ವಲಸೆ ಹೋದವರು ಭಾರತದಲ್ಲಿ ಸಂಪಾದಿಸುವುದಕ್ಕಿಂತ ಹೆಚ್ಚಿನ ಸಂಪಾದಿಸಲಾರಂಭಿಸಿದರು. ಮಧ್ಯಪ್ರಾಚ್ಯಕ್ಕೆ ಭಾರತದಿಂದ ದೊಡ್ಡ ಸಂಖ್ಯೆಯಲ್ಲಿ ವಲಸಿಗರು ತೆರಳುತ್ತಿದ್ದಂತೆ ಅಲ್ಲಿಂದ ಭಾರತಕ್ಕೆ ಹರಿದು ಬರಲಾಂಭಿಸಿದ ಸಂಪತ್ತು ಕೂಡಾ ಹೆಚ್ಚಳಗೊಂಡಿತು. ಇದು ಭಾರತದ ಆರ್ಥಿಕತೆಯ ಪ್ರವರ್ಧಮಾನಕ್ಕೆ ಕಾರಣವಾಯಿತು. ಹೀಗೆ ಹರಿದು ಬಂದ ಬಹುತೇಕ ಸಂಪತ್ತು, ದೀರ್ಘಕಾಲಿಕ ಹೂಡಿಕೆ ಬದಲಿಗೆ,
ಅನುತ್ಪಾದಕ ಚಟುವಟಿಕೆಗಳ ಮೇಲೆಯೆ ಹೆಚ್ಚು ಹೂಡಲ್ಪಟ್ಟಿತು. ಉದಾಹರಣೆಗೆ ಆಸ್ತಿ ಖರೀದಿ, ಬಂಗಲೆ ನಿರ್ಮಾಣ ಇತ್ಯಾದಿ. ಕೆಲ ವಲಸಿಗರು ಅತಿ ದೊಡ್ಡ ಪ್ರಮಾಣದಲ್ಲಿ ಸಂಪತ್ತು ಸೃಷ್ಟಿಸಿದರು ಜತೆಗೆ ಉದ್ಯೋಗ ಕೂಡಾ ಸೃಷ್ಟಿಸಿದರು. ಈ ಮಧ್ಯಪ್ರಾಚ್ಯ ಬೆಳವಣಿಗೆ, ಕೊಡುಗೆಗಳು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಗಮನ ಸೆಳೆಯಿತು. ಸರಕಾರಗಳು ಹಾಗೂ ವಲಸಿಗರ ನಡುವೆ ಪರಸ್ಪರ ಲಾಭದಾಯಕ ಸಂಬಂಧ ಏರ್ಪಡಲು ಇದು ಕಾರಣವಾಯಿತು.ಭಾರತ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಸಂಬಂಧ ವಲಸಿಗರ ಕಠಿಣ ಕಾಯಕ ಹಾಗೂ ರಾಷ್ಟ್ರನಿಷ್ಠೆ ಕಾರಣಕ್ಕಾಗಿ ಬಲವರ್ಧನೆಯಾಯಿತು.
ಅನಿವಾಸಿ¨ ಭಾರತೀಯರ ಬೇಡಿಕೆಗಳಿಗೆ ಭಾರತ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿತು. ವಿದೇಶಗಳಲ್ಲಿರುವ ರಾಯಭಾರ ಕಚೇರಿಗಳಲ್ಲಿ ಅಗತ್ಯ ಅನುಕೂಲಗಳನ್ನು ಸೃಷ್ಟಿಸುವುದರ ಜತೆಗೆ ಭಾರತದ ನಾನಾ ರಾಜ್ಯಗಳ ರಾಜಧಾನಿಗಳಲ್ಲೂ ವಿಶೇಷ ಕಚೇರಿಗಳನ್ನು ತೆರೆಯಲಾಯಿತು. ವಾರ್ಷಿಕ ಪ್ರವಾಸಿ ದಿವಸ್ ಹಾಗೂ ಪ್ರವಾಸಿ ಸನ್ಮಾನ್ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಪರಸ್ಪರ ಸಂಬಂದಗಳು ಹಾಗೂ ಸಹಕಾರಗಳು ಗೌರವಯುತ ವಾತಾವರಣದಲ್ಲಿದ್ದುದರಿಂದ ಉಭಯತರರ ನಡುವಣ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾಯಿತು. ಸರಕಾರದ ಮಧ್ಯಪ್ರವೇಶ ಪೂರಕವಾಗಿದ್ದರಿಂದ, ವಲಸಿಗರು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಲಾರಂಭಿಸಿದರು. ಅನಿವಾಸಿ ಭಾರತೀಯ ಗುಂಪುಗಳ ಮುಖ್ಯಸ್ಥರ ಓಲೈಕೆಗೆ ರಾಜಕೀಯ ಪಕ್ಷಗಳು ಮುಂದಾದವು.
ಪರಿಣಾಮ ಅವರು ಆರ್ಥಿಕವಾಗಿ ರಾಜಕೀಯ ಪಕ್ಷಗಳಿಗೆ ಸಹಾಯ ಹಸ್ತ ಚಾಚಿದರು. ವಲಸೆ ರಾಷ್ಟ್ರಗಳ ಕಾನೂನು ಇಂತಹ ವಲಸಿಗರಿಗೆ ಸಮಸ್ಯೆ ಸೃಷ್ಟಿಸುತ್ತಿರುವುದು ಕಂಡು ಬಂದರೆ, ಸರಕಾರ ಮಧ್ಯ ಪ್ರವೇಶಿಸಿ, ಅವರನ್ನು ಅಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಿತು ಅಥವಾ ಭಾರತದಲ್ಲೇ ಸಾಲ ದೊರಕುವಂತೆ ಮಾಡಿ ಇಲ್ಲೇ ಉಳಿದುಕೊಳ್ಳಲು ನೆರವು ನೀಡಿತು. ಇತರೆ ಶಬ್ದಗಳಲ್ಲಿ ಹೇಳುವುದಾದರೆ, ಗಲ್ಫ್‍ನಲ್ಲಿರುವ ಭಾರತೀಯರು ಭಾರತದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದರು ಹಾಗೂ ಅದಕ್ಕೆ ಪ್ರತಿಯಾಗಿ ರಾಜ್ಯಗಳಲ್ಲಿ ದೊರೆಯಬಹುದಾದ ಸೌಲಭ್ಯಗಳನ್ನು ಪಡೆದರು. ವಿದೇಶಗಳ ನಾನಾ ಕಡೆಗಳಲ್ಲಿ ಭಾರತೀಯರು ಯಾವುದೇ ಸಮಸ್ಯೆಗೆ ಸಿಲುಕಿಕೊಂಡ ಸಂದರ್ಭದಲ್ಲಿ ಭಾರತ ಸರಕಾರ ಅವರ ನೆರವಿಗೆ ಧಾವಿಸಿತು. ಇದು ಭಾರತ ಸರಕಾರ ಹಿಂದೆ ಅನುಸರಿಸುತ್ತಿದ್ದ ನೀತಿಗೆ ತದ್ವಿರುದ್ಧವಾಗಿತ್ತು. ಈ ಹಿಂದೆ ವಿಶ್ವದ ಇತರೆಡೆ ಭಾರತೀಯರು ಸಮಸ್ಯೆಗೆ ಸಿಲುಕಿಕೊಂಡಾಗ ಭಾರತ ಸರಕಾರ ಅವರಿಗೆ ಪುನರ್ ವಸತಿ ವ್ಯವಸ್ಥೆ ಮಾತ್ರ ಕಲ್ಪಿಸುತ್ತಿತ್ತು. ಉದಾಹರಣೆಗೆ ಬರ್ಮಾ (ಈಗಿನ ಮಾಯಾನ್‍ಮಾರ್), ದಿ ಕೆರಿಬಿಯನ್ ದೇಶಗಳು, ಉಗಾಂಡ ಮತ್ತಿತರ ದೇಶಗಳನ್ನು ತ್ಯಜಿಸಿ ಅನಿವಾಸಿ ಭಾರತೀಯರು ಬಂದಾಗ ಅವರಿಗೆ ಪುನರ್ ವಸತಿ ವ್ಯವಸ್ಥೆ ಮಾತ್ರ ಕಲ್ಪಿಸಲಾಗಿತ್ತು. ಭಾರತದ ಬದಲಾದ ಈ ಹೊಸ ನೀತಿ ಫಿಜಿಯಲ್ಲಿ ಭಾರತೀಯ ಸಂಜಾತರ ವಿರುದ್ಧ ಬಂಡಾಯ ಭುಗಿಲೆದ್ದಾಗ ಜಾರಿಗೊಂಡಿತು. 1988ರಲ್ಲಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ, ಈ ಬಂಡಾಯದ ಕಾರಣಕ್ಕೆ, ಫಿಜಿ ಕಾಮನ್‍ವೆಲ್ತ್ ಗುಂಪಿನಿಂದ ಅಮಾನತುಗೊಳ್ಳುವಂತೆ ಮಾಡಿದ್ದರು.
ಸುಖದ ಸನ್ನಿವೇಶದಲ್ಲಿ ಎದುರಾಗುವ ಶೇಕ್ಸ್‍ಪಿಯರ್ ಕಾದಂಬರಿಗಳ ಖಳನಾಯಕನಂತೆ ಕೋವಿಡ್ 19 ದೇಶವನ್ನು ಪ್ರವೇಶಿಸಿದೆ. ಎಲ್ಲಾ ವ್ಯವಸ್ಥೆಗಳನ್ನು ಅದು ಅಲ್ಲೋಲಕಲ್ಲೋಲ ಮಾಡಿದೆ. ಪ್ರತಿಯೊಬ್ಬರ ನಡುವೆಯೂ ಮುಖಾಮುಖಿಯ ಸನ್ನಿವೇಶ ಸೃಷ್ಟಿಸಿದೆ. ವಿಶ್ವದಾದ್ಯಂತ ಪಸರಿಸಿರುವ ಅನಿವಾಸಿ ಭಾರತೀಯರು ಮೊದಲ ಬಾರಿಗೆ ಈ ಸಾಂಕ್ರಾಮಿಕ ರೋಗಕ್ಕೆ ತುತ್ತಾದರು ಹಾಗೂ ಹರಡಿದರು. ದೇಶದ ಮೊದಲ ಕೋವಿಡ್ 19 ಪ್ರಕರಣ ವುಹಾನ್‍ನಿಂದ ಭಾರತಕ್ಕೆ ಮರಳಿದ ಕೇರಳದ ವಿದ್ಯಾರ್ಥಿಯೊಬ್ಬನ ಮೂಲಕ ವರದಿಯಾಯಿತು. ಬಳಿಕ ಕೋವಿಡ್ 19ರ ಹಾಟ್‍ಸ್ಪಾಟ್‍ನಂತಿರುವ ಇಟಲಿ, ಸ್ಪೇನ್, ಇರಾನ್‍ನಲ್ಲಿ ಸಿಲುಕಿ ಹಾಕಿಕೊಂಡಿದ್ದ ಭಾರತೀಯರು ಅವರ ರಕ್ಷಣೆಗೆ ಮೊರೆ ಇಟ್ಟರು. ವಿಮಾನ ಯಾನ ಸೇವೆ ಸ್ಥಗಿತಗೊಂಡಿಲ್ಲದಿದ್ದರೆ, ಸಾವಿರಾರು ಭಾರತೀಯರು ವೈರಸ್ ಜತೆಗೆ ಅಥವಾ ಇಲ್ಲದೆ ಭಾರತದೊಳಕ್ಕೆ ಕಾಲಿಡುತ್ತಿದ್ದರು. ತನ್ಮೂಲಕ ಎಲ್ಲಾ ಕ್ಷೇತ್ರಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸುತ್ತಿದ್ದರು. ವಿಮಾನ ಸಂಚಾರ ಸ್ಥಗಿತದ ನಡುವೆಯೇ ಭಾರತ ಬೇರೆ ಬೇರೆ ದೇಶಗಳಲ್ಲಿ ಸಿಲುಕಿ ಹಾಕಿಕೊಂಡಿದ್ದ ತನ್ನ ನಾಗರಿಕರನ್ನು ಭಾರತಕ್ಕೆ ಕರೆ ತಂದಿತು. ಆದರೆ ನಿರೀಕ್ಷೆ ನಮ್ಮ ಸಾಮರ್ಥ್ಯವನ್ನು ಮೀರಿತ್ತು.