ವಾಷಿಂಗ್ಟನ್ (ಅಮೆರಿಕ): ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಕೊರೊನಾ ಸೋಂಕು ರೌದ್ರ ನರ್ತನ ತೋರುತ್ತಿದೆ. ಮೊನ್ನೆಯಷ್ಟೇ 865 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದ ಅಮೆರಿಕದಲ್ಲಿ ಮತ್ತೆ ಸೋಂಕು ಉಲ್ಬಣಿಸಿದೆ. ಸುಮಾರು ಎರಡು ದಿನದಲ್ಲಿ ಸಾವಿರಾರು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈಗ ಅಮೆರಿಕದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5 ಸಾವಿರದ ಗಡಿ ದಾಟಿದೆ.
ಅಮೆರಿಕದ ಸಾವಿನ ಪ್ರಮಾಣ ಸ್ಪೇನ್ ಹಾಗೂ ಇಟಲಿಗಿಂತ ಕಡಿಮೆ ಇದ್ದು, ಚೀನಾವನ್ನು ಹಿಂದಿಕ್ಕಿದೆ. ಜಾನ್ಸ್ ಹಾಪ್ಕಿನ್ಸ್ ಪ್ರಕಾರ ಸುಮಾರು 2,16,722 ಮಂದಿ ಸೋಂಕಿತರಿದ್ದು 8,672 ಮಂದಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಸ್ಥಿತಿ ಬಿಗಡಾಯಿಸಿದ್ದು, ಭಯಾನಕವಾಗಿದೆ ಎಂದಿದ್ದಾರೆ. ಹಿಂದಿನ ಭಾನುವಾರ ಅಮೆರಿಕದ ವಿಜ್ಞಾನಿ ಅಂಥೋನಿ ಫೌಸಿ ಅಮೆರಿಕದಲ್ಲಿ ಕೊರೊನಾ ಉಪಟಳಕ್ಕೆ 1 ಲಕ್ಷದಿಂದ 2 ಲಕ್ಷ ಮಂದಿ ಬಲಿಯಾಗಬಹುದು ಎಂಬ ಎಚ್ಚರಿಕೆ ನೀಡಿದ್ದರು.
ಅಮೆರಿಕ ನಂತರ ಇಟಲಿ ಹಾಗೂ ಸ್ಪೇನ್ ಕೊರೊನಾ ದಾಳಿಗೆ ತತ್ತರಿಸಿವೆ. 1,10, 574 ಮಂದಿ ಸೋಂಕಿತರಿರುವ ಇಟಲಿಯಲ್ಲಿ ಈವರೆಗೂ ಸೋಂಕಿನಿಂದ ಸಾವನ್ನಪ್ಪಿದವರು 13,155. ವಿಶ್ವದಲ್ಲೇ ಅತಿ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿರೋ ಇಲ್ಲಿ 16,847 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಟಲಿಯ ನಂತರ ಸ್ಪೇನ್ನಲ್ಲಿ ಸೋಂಕಿತರ ಸಂಖ್ಯೆ ಮೊದಲ ಬಾರಿಗೆ ಲಕ್ಷ ದಾಟಿದೆ. 1,04,118 ಮಂದಿ ಸೋಂಕಿತರಿದ್ದು 9,387 ಮಂದಿ ಈವರೆಗೂ ಮೃತಪಟ್ಟಿದ್ದಾರೆ. ಸರಿಸುಮಾರು 22 ಸಾವಿರ ಮಂದಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಸೋಂಕು ಉಗಮಿಸಿದ್ದ ಚೀನಾದಲ್ಲಿ ಈವರೆಗೂ 82, ಸಾವಿರ ಮಂದಿ ಸೋಂಕಿತರಿದ್ದಾರೆ. ಸಾವನ್ನಪ್ಪುವರರ ಸಂಖ್ಯೆಯೂ ಕೂಡಾ ಗಣನೀಯವಾಗಿ ಕಡಿಮೆಯಾಗುತ್ತಿದೆ. 76,426 ಮಂದಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಜರ್ಮನಿಯಲ್ಲಿ 71,981 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 931 ಮಂದಿ ಮೃತಪಟ್ಟಿದ್ದಾರೆ. 18,700 ಮಂದಿಯನ್ನು ಕೊರೊನಾದಿಂದ ಗುಣಮುಖರನ್ನಾಗಿ ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಲಾಗಿದೆ. ಅತಿ ಹೆಚ್ಚು ಸೋಂಕು ಹರಡಿದ ರಾಷ್ಟ್ರಗಳಲ್ಲಿ ಜರ್ಮನಿಯ ನಂತರ ಫ್ರಾನ್ಸ್, ಇರಾನ್, ಇಂಗ್ಲೆಂಡ್, ಸ್ವಿಟ್ಜರ್ಲ್ಯಾಂಡ್ ರಾಷ್ಟ್ರಗಳಿವೆ.