ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಅಧಿಕಾರಕ್ಕೆ ಬಂದು 15 ವರ್ಷಗಳ ನಂತರದಲ್ಲಿ ಇದೇ ಮೊದಲ ಬಾರಿಗೆ ಪೂರ್ವನಿಯೋಜಿತವಾಗಿಲ್ಲದ ಘೋಷಣೆಯನ್ನು ಮಾಡಿದ್ದರು. “ಪರಿಸ್ಥಿತಿ ಗಂಭೀರವಾಗಿದೆ. ಜರ್ಮನಿ ರೂಪುಗೊಂಡ ನಂತರವಷ್ಟೇ ಅಲ್ಲ, ಎರಡನೇ ವಿಶ್ವಯುದ್ಧದ ನಂತರದಲ್ಲೇ ಇದೇ ಮೊದಲ ಬಾರಿಗೆ ಇಂಥದ್ದೊಂದು ತುರ್ತು ಕ್ರಮ ತೆಗೆದುಕೊಳ್ಳುವ ಅಗತ್ಯ ಮೂಡಿದೆ” ಎಂದು ಅವರು ಹೇಳಿದ್ದರು. ಅಂದಹಾಗೆ, ಇದನ್ನು ಅವರು ಹೇಳಿದ್ದು ಮೇಡ್ ಇನ್ ಚೀನಾ ಕೊರೊನಾವೈರಸ್ ಬಗ್ಗೆ. ಜರ್ಮನಿಯಲ್ಲಿ ಮಾರ್ಚ್ 21 ರ ವೇಳೆಗೆ 22,364 ಪ್ರಕರಣಗಳು ಕಂಡುಬಂದಿವೆ. ಎಲ್ಲರನ್ನೂ ಉಳಿಸುವ ಪ್ರಯತ್ನದಲ್ಲಿ ವೈದ್ಯ ಪಡೆ ಇದ್ದರೂ, 84 ಜನರು ಸಾವನ್ನಪ್ಪಿದ್ದಾರೆ. ಆದರೆ ಜಾಗತಿಕ ಮರಣ ಪ್ರಮಾಣ ಶೇ. 4.26 ಇದ್ದರೆ, ಇಲ್ಲಿ ಇದು ಶೇ. 0.37 ಆಗಿದೆ.
ಇನ್ನೊಂದೆಡೆ ಇಟಲಿಯಲ್ಲಿ 4825 ಜನರು ಸಾವನ್ನಪ್ಪಿದ್ದಾರೆ. 53578 ಪ್ರಕರಣಗಳು ಕಂಡುಬಂದಿವೆ. ಇದು ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯಾಗಿದ್ದು, ಮರಣ ಪ್ರಮಾಣ ಶೇ. 9 ಆಗಿದೆ. ಹಾಗಾದರೆ ಇಟಲಿಯಲ್ಲಿ ಮಾಡಲು ಸಾಧ್ಯವಾಗದ ಯಾವ ಕ್ರಮಗಳನ್ನು ಜರ್ಮನಿ ಕೈಗೊಂಡಿದೆ? ಇದರಿಂದ ಭಾರತವೇನಾದರೂ ಕಲಿಯಲು ಸಾಧ್ಯವಿದೆಯೇ? ಈವರೆಗೆ ಭಾರತ ಯಾವ ಸ್ಥಾನದಲ್ಲಿದೆ? ಈ ವಿಷಯದ ಮೇಲೆ ನಾವು ಗಮನಹರಿಸುವುದು ಅತ್ಯಂತ ಅಗತ್ಯದ್ದಾಗಿದೆ.
ಮಾರ್ಚ್ 16 ರಂದು ಜಿನೀವಾದಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ್ದ ಡಬ್ಲ್ಯೂಹೆಚ್‌ಒ (ವಿಶ್ವ ಆರೋಗ್ಯ ಸಂಸ್ಥೆ)ದ ಟೆಡ್ರೋಸ್ ಅಧಾನೋಮ್ ಘೆಬ್ರೆಯೆಸುಸ್ “ಎಲ್ಲ ದೇಶಗಳಿಗೂ ನಾವು ನೀಡುವ ಒಂದು ಸರಳ ಸಂದೇಶ ಇಷ್ಟೇ. ಪರೀಕ್ಷೆಯನ್ನು ಮಾಡುತ್ತಲೇ ಇರಿ. ಎಲ್ಲ ಅನುಮಾನಾಸ್ಪದ ವ್ಯಕ್ತಿಗಳನ್ನೂ ಪರೀಕ್ಷೆ ಮಾಡಿ. ಈ ಸಾಂಕ್ರಾಮಿಕ ರೋಗವನ್ನು ಹಾಗೇ ಸುಮ್ಮನೆ ತಡೆಯಲಾಗದು” ಎಂದಿದ್ದಾರೆ. ಈ ಸಂದೇಶವನ್ನು ಜರ್ಮನಿ ಅಕ್ಷರಶಃ ಅನುಸರಿಸಿತು. ತೀರಾ ಸಣ್ಣ ಪ್ರಕರಣಗಳಲ್ಲೂ ಪರೀಕ್ಷೆ ಮಾಡಿತು. ಭಾರತದಂತೆಯೇ ಶಾಲೆಗಳು, ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಸಭೆಗಳನ್ನು ನಿಷೇಧಿಸಿತು ಮತ್ತು ಶೀಘ್ರದಲ್ಲೇ ಲಾಕ್‌ಡೌನ್ ಮಾಡಲಿದೆ. ಇತರೆ ಹಲವು ದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ವ್ಯಾಪಕವಾಗಿ ಏರಿಕೆಯಾಗುತ್ತಿದೆ. ಮಾರ್ಚ್ 10 ರಂದು 341 ಪ್ರಕರಣಗಳು ಇದ್ದರೆ, ಮಾರ್ಚ್ 20ಕ್ಕೆ 4528 ಪ್ರಕರಣಗಳು ಕಂಡುಬಂದಿವೆ. ಪರಿಣಿತರು ಇದನ್ನು ಸಮುದಾಯ ಸಾಂಕ್ರಾಮಿಕ ಹಂತ ಎಂದು ಕರೆದಿದ್ದು, ಇದು ಯಾವ ಮಟ್ಟವನ್ನು ತಲುಪುತ್ತದೆ ಎಂದು ತಿಳಿಯಲಾಗದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆಯ ವ್ಯಾಪ್ತಿಯನ್ನು ಮೊದಲೇ ಅರಿತುಕೊಂಡು ಕ್ರಮ ಕೈಗೊಳ್ಳಲು ಆರಂಭಿಸಿದ ಕೆಲವೇ ದೇಶಗಳಲ್ಲಿ ಭಾರತ ಕೂಡ ಒಂದು. ಫೆಬ್ರವರಿ 1 ರಿಂದಲೇ ಚೀನಾದ ವುಹಾನ್‌ನಿಂದ ತನ್ನ ನಾಗರಿಕರನ್ನು ನವದೆಹಲಿ ವಾಪಸ್ ಕರೆಸಿಕೊಳ್ಳಲು ಆರಂಭಿಸಿತು. ಫೆಬ್ರವರಿ 4 ರ ವೇಳೆಗೆ ಭಾರತಕ್ಕೆ ಚೀನಾದಿಂದ ಯಾರೂ ಆಗಮಿಸುವಂತಿಲ್ಲ ಎಂದು ನಿಷೇಧ ಹೇರಲಾಯಿತು. ಚೀನಾ ಪೌರರಿಗೆ ವಿತರಿಸಿದ ವೀಸಾಗಳನ್ನೂ ರದ್ದುಗೊಳಿಸಲಾಯಿತು. ನಿಷೇಧವನ್ನು ನಿಧಾನವಾಗಿ ಜಪಾನ್, ದಕ್ಷಿಣ ಕೊರಿಯಾ, ಯುರೋಪ್, ಮಲೇಷ್ಯಾ, ಇರಾನ್, ಗಲ್ಫ್ ಮತ್ತು ಇತರ ದೇಶಗಳಿಗೆ ವಿಸ್ತರಿಸಲಾಯಿತು. ಭಾರತ ಈಗ 22 ರಿಂದ 29 ಮಾರ್ಚ್‌ವರೆಗೆ ವಿಮಾನ ಹಾರಾಟವನ್ನೇ ರದ್ದುಗೊಳಿಸಿದೆ.
ಅತ್ಯಂತ ಮಹತ್ವದ ಸಂಗತಿಯೆಂದರೆ ಮಾರ್ಚ್ 9 ರಿಂದ ಭಾರತದ 1.1 ಮೊಬೈಲ್ ಫೋನ್ ಬಳಕೆದಾರರು ತಮ್ಮ ಮೊಬೈಲ್ ಫೋನ್‌ನಲ್ಲಿ ಕೊರೊನಾವೈರಸ್ ತಡೆಯುವ ಬಗ್ಗೆ ಸಂದೇಶಗಳನ್ನು ಕಾಲರ್ ಟ್ಯೂನ್ ರೂಪದಲ್ಲಿ ಕೇಳಿಸಿಕೊಳ್ಳುವ ವ್ಯವಸ್ಥೆ ಮಾಡಲಾಯಿತು. ಸೋಪ್ ಬಳಸಿ ಆಗಾಗ್ಗೆ ನಿಮ್ಮ ಕೈ ತೊಳೆದುಕೊಳ್ಳಿ, ಮುಖ, ಕಣ್ಣುಗಳು ಅಥವಾ ಮೂಗನ್ನು ಮುಟ್ಟಿಕೊಳ್ಳಬೇಡಿ” ಎಂದು ಈ ಸಂದೇಶದಲ್ಲಿ ಅರಿವು ಮೂಡಿಸಲಾಯಿತು. ನಮ್ಮ ದೇಶದ ಪ್ರತಿ ಮೂಲೆ ಮೂಲೆಯನ್ನೂ ತಲುಪುವಂತೆ ಮಾಡಿದ ಅತ್ಯಂತ ಯಶಸ್ವಿ ಕ್ಯಾಂಪೇನ್‌ಗಳಲ್ಲಿ ಇದೂ ಒಂದಾಗಿತ್ತು.
ಅಂದಿನಿಂದಲೂ ಸರ್ಕಾರವು ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಸೋಂಕು ಹರಡುವುದನ್ನು ತಪ್ಪಿಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಮಾರ್ಚ್ 18 ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಜನರು ಸಹಿಷ್ಣುತೆ ಮತ್ತು ನಿರ್ಣಯವನ್ನು ಕೈಗೊಳ್ಳುವ ಅಗತ್ಯವಿದೆ ಎಂದಿದ್ದರು. ಆದರೆ ವಿಪರೀತ ಭೀತಿ ಅಥವಾ ನಿಷ್ಕಾಳಜಿಯನ್ನು ಕೂಡ ನಾವು ಹೊಂದಬಾರದು ಎಂದೂ ಅವರು ಎಚ್ಚರಿಕೆ ನೀಡಿದ್ದರು. ಮಾರ್ಚ್ 22 ರಂದು ಭಾನುವಾರ ಜನರೇ ಜನತಾ ಕರ್ಫ್ಯೂದಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಿ ಭಾಗಶಃ ಅಥವಾ ಸಂಪೂರ್ಣ ಲಾಕ್‌ಡೌನ್ ಮಾಡಲು ದೇಶ ಸಿದ್ಧವಾಗಬೇಕು ಎಂದು ಕರೆ ನೀಡಿದ್ದಾರೆ. ಇದೊಂದು ರೀತಿಯಲ್ಲಿ ಯುದ್ಧಕ್ಕೆ ಮುಂಚಿನ ತಯಾರಿಯಂತಿದೆ. ಈ ಅನಾಮಿಕ, ಎದುರಿಸಲಾಗದ ಮತ್ತು ಅಗೋಚರ ಶತ್ರು ಉಂಟುಮಾಡುವ ಎಲ್ಲ ರೀತಿಯ ಪರಿಣಾಮಗಳನ್ನೂ ನಾವು ಎದುರಿಸುವ ಸನ್ನಿವೇಶ ಈ ಯುದ್ಧದಿಂದ ಉಂಟಾಗಬಹುದು.