ನವದೆಹಲಿ:ಹಿರಿಯ ನಾಯಕರ ಹಾಗೂ ಲಕ್ಷಾಂತರ ಕಾರ್ಯಕರ್ತರ ಒತ್ತಾಯಕ್ಕೆ ಮಣಿಯದ ರಾಹುಲ್ ಗಾಂಧಿ ಇದೀಗ ತಮ್ಮ ನಿರ್ಧಾರವನ್ನು ಮತ್ತಷ್ಟು ಸ್ಪಷ್ಟಪಡಿಸಿದ್ದು, ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಸಂಸದೀಯ ಸಭೆಯಲ್ಲಿ ರಾಹುಲ್ ಗಾಂಧಿ ತಮ್ಮ ಹಿಂದಿನ ನಿಲುವಿಗೆ ಬದ್ಧರಾಗಿರುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ರಾಗಾ ಮುಂದುವರೆಯುವಂತೆ ಒತ್ತಾಯ ಮಾಡಲಾಗಿದ್ದರೂ ಆ ಮನವಿಯನ್ನು ರಾಹುಲ್ ಗಾಂಧಿ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಮುಕ್ತಾಯವಾದ ಲೋಕಸಭಾ ಚುನಾವಣೆಯ ಸೋಲಿನ ಹೊಣೆಯನ್ನು ಎಲ್ಲರೂ ಸಮಾನವಾಗಿ ತೆಗೆದುಕೊಳ್ಳುವುದಾಗಿ ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಹಾಗೂ ಮನೀಶ್ ತಿವಾರಿ ಹೇಳಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಕಾಂಗ್ರೆಸ್ ಯುವಮೋರ್ಚಾದಿಂದ ಧರಣಿ
ಕಾಂಗ್ರೆಸ್ ಯುವಮೋರ್ಚಾ ಹಾಗೂ ನೂರಾರು ಕಾರ್ಯಕರ್ತರು ರಾಹುಲ್ ಗಾಂಧಿ ನಿವಾಸದಲ್ಲಿ ಧರಣಿ ನಡೆಸಿ, ರಾಗಾ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಒತ್ತಾಯ ಮಾಡಿದರು. ಬ್ಯಾನರ್ ಹಿಡಿದು, ಘೋಷಣೆ ಕೂಗಿ ತಮ್ಮ ಬೆಂಬಲ ಸೂಚಿಸಿದ್ದಾರೆ.