ನವದೆಹಲಿ:ಲೋಕಸಭೆಯಲ್ಲಿ 12 ತಾಸುಗಳ ಕಾಲ ಸುದೀರ್ಘ ಚರ್ಚೆಯ ಅನುಮೋದನೆ ಪಡೆದ ಮಹತ್ವದ ಪೌರತ್ವ ತಿದ್ದುಪಡಿ ಮಸೂದೆಗೆ ಇಂದು ಸಂಸತ್ತಿನ ಮೇಲ್ಮನೆ ರಾಜ್ಯಸಭೆಯಲ್ಲಿ 8 ತಾಸುಗಳ ಚರ್ಚೆಯ ಬಳಿಕ ಅಂಗೀಕಾರ ಸಿಕ್ಕಿದೆ.
ಪಾಕಿಸ್ತಾನ, ಬಾಂಗ್ಲಾ ದೇಶ ಹಾಗು ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡುವ ತಿದ್ದುಪಡಿ ಮಸೂದೆಯನ್ನು ಬುಧವಾರ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಮಂಡಿಸಿದರು.
ಮಸೂದೆ ಕುರಿತು ಮಧ್ಯಾಹ್ನ 12 ಗಂಟೆಯಿಂದ ಸುದೀರ್ಘ ಚರ್ಚೆ ನಡೆಯಿತು. ಮಸೂದೆ ಸಾಧಕ ಬಾಧಕಗಳ ಬಗ್ಗೆ ಮೇಲ್ಮನೆ ಸದಸ್ಯರು ಸುಮಾರು 8 ಗಂಟೆಗಳ ಕಾಲ ಬಿಸಿಬಿಸಿ ಚರ್ಚೆ ನಡೆಸಿದ ಬಳಿಕ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಮಸೂದೆಯನ್ನು ಮತಕ್ಕೆ ಹಾಕಿದರು. ಮತಕ್ಕೆ ಹಾಕಿದಾಗ 230 ರಾಜ್ಯಸಭೆ ಸದಸ್ಯರ ಪೈಕಿ ಮಸೂದೆ ಪರವಾಗಿ 125, ವಿರುದ್ದವಾಗಿ 105 ಮತಗಳು ಬಿದ್ದವು. ಆದರೆ, ಶಿವಸೇನಾ ಲೋಕಸಭೆಯಲ್ಲಿ ಮಸೂದೆ ಪರವಾಗಿ ಮತ ಹಾಕಿದ್ದು ರಾಜ್ಯಸಭೆಯಲ್ಲಿ ವೋಟಿಂಗ್ ಬಹಿಷ್ಕರಿಸಿ ಸದನದಿಂದ ಹೊರನಡೆಯಿತು.
ಮಸೂದೆ ಮುಸ್ಲೀಂ ವಿರೋಧಿ ಅಲ್ಲ: ಅಮಿತ್ ಶಾ ಸ್ಪಷ್ಟನೆ
ರಾಜ್ಯಸಭೆಯಲ್ಲಿ ಅಮಿತ್ ಶಾ ಮಸೂದೆ ಮಂಡಿಸಿದಾಗ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿ ಸದನದಲ್ಲಿ ಗದ್ದಲ ಎಬ್ಬಿಸಿದವು. ಇದರ ನಡುವೆಯೇ ವಿಧೇಯಕ ಮಂಡಿಸಿದ ಗೃಹ ಸಚಿವರು, ಮಸೂದೆ ಅಲ್ಪಸಂಖ್ಯಾತ ಮುಸ್ಲೀಮರ ವಿರುದ್ಧವಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಐತಿಹಾಸಿಕ ಮಸೂದೆಯಿಂದ ಬಲಿಪಶುಗಳಾಗಿದ್ದ ಕೊಟ್ಯಂತರ ಜನರ ಕನಸು ಇಂದು ನನಸಾಗಿವೆ. ಅವರ ಘನತೆ ಮತ್ತು ಸುರಕ್ಷತೆ ಹೆಚ್ಚಿಸುವ ಸಲುವಾಗಿಯೇ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಹಕ್ಕುಗಳ ರಕ್ಷಣೆಗೆ ನಿಂತ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅಮಿತ್ ಶಾ ಹೇಳಿದರು.