ನವದೆಹಲಿ:ಮಹಿಳೆಯರ ಸುರಕ್ಷತೆ ಮತ್ತು ಅವರ ವಿರುದ್ಧದ ಅಪರಾಧಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಕೇಂದ್ರ ಗೃಹ ಸಚಿವಾಲಯ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಸಲಹೆಗಳನ್ನು ನೀಡಿದೆ.
ಉತ್ತರ ಪ್ರದೇಶದ ಹಥ್ರಾಸ್‌ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾದ ನಂತರ ಕೇಂದ್ರ ಗೃಹ ಸಚಿವಾಲಯ ಮೂರು ಪುಟಗಳ ಕಡ್ಡಾಯವಾಗಿ ಪಾಲಿಸಬೇಕಾದ ಸೂತ್ರಗಳನ್ನು ನೀಡಿದೆ.
ಅಪರಾಧ ನಡೆದ ಸಂದರ್ಭದಲ್ಲಿ ಸಿಆರ್‌ಪಿಸಿ ಅಡಿಯಲ್ಲಿ ಕಡ್ಡಾಯವಾಗಿ ಎಫ್‌ಐಆರ್ ನೋಂದಣಿ ಮಾಡಬೇಕೆಂದು ಗೃಹ ಸಚಿವಾಲಯ ಹೇಳಿದೆ. "ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಅಪರಾಧದ ಬಗ್ಗೆ ಮಾಹಿತಿ ಬಂದ ಸಂದರ್ಭದಲ್ಲಿ, ಪೊಲೀಸ್ ಠಾಣೆಯ ವ್ಯಾಪ್ತಿಯಿಂದ ಹೊರಗೆ ಅಪರಾಧ ನಡೆದರೆ, ಎಫ್‌ಐಆರ್ ಅಥವಾ "ಜೀರೋ ಎಫ್‌ಐಆರ್" ಅನ್ನು ನೋಂದಾಯಿಸಲು ಪೊಲೀಸರಿಗೆ ಕಾನೂನು ಅನುವು ಮಾಡಿಕೊಡುತ್ತದೆ" ಎಂದು ಸಚಿವಾಲಯ ಹೇಳಿದೆ.
"ಕಾನೂನಿನಲ್ಲಿ ಕಟ್ಟುನಿಟ್ಟಾದ ನಿಬಂಧನೆಗಳು ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಸಹ, ಈ ಕಡ್ಡಾಯ ಅವಶ್ಯಕತೆಗಳನ್ನು ಪಾಲಿಸುವಲ್ಲಿ ಪೊಲೀಸರ ವೈಫಲ್ಯವು ನ್ಯಾಯವನ್ನು ತಲುಪಿಸಲು, ವಿಶೇಷವಾಗಿ ಮಹಿಳಾ ಸುರಕ್ಷತೆಯ ಸಂದರ್ಭದಲ್ಲಿ ಉತ್ತಮವಾದದ್ದಲ್ಲ" ಎಂದು ಹೇಳಿದೆ.
"ಅಂತಹ ನ್ಯೂನತೆ ಕಂಡುಬಂದರೆ, ತನಿಖೆ ನಡೆಸಬೇಕು ಮತ್ತು ಅದಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ತೆಗೆದುಕೊಳ್ಳಬೇಕು" ಎಂದು ರಾಜ್ಯಗಳಿಗೆ ತಿಳಿಸಿದೆ.