ಕೆಲವು ದಿನಗಳ ಹಿಂದೆ, ಲಿಖಿತ ಉತ್ತರದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಭಾರತೀಯ ಚುನಾವಣಾ ಆಯೋಗವು ಚುನಾವಣೆ ಧನ ಸಹಾಯದ ಪರವಾಗಿಲ್ಲ ಎಂದು ತಿಳಿಸಿದ್ದರು. "ಚುನಾವಣಾ ಆಯೋಗವು ರಾಜ್ಯ ಧನ ಸಹಾಯದ ಪರವಾಗಿಲ್ಲ ಎಂದು ಸರ್ಕಾರಕ್ಕೆ ತಿಳಿಸಿದೆ. ಏಕೆಂದರೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚುಗಳನ್ನು ಅಥವಾ ಇತರರಿಂದ ಖರ್ಚು ಮಾಡುವ ವೆಚ್ಚವು ಸರ್ಕಾರವು ಒದಗಿಸುವ ವೆಚ್ಚಕ್ಕಿಂತ ಹೆಚ್ಚಾಗಿದೆಯೆ ಎಂದು ಪರೀಕ್ಷಿಸಲು ಸಾಧ್ಯವಾಗುವುದಿಲ್ಲ" ಎಂದು ಅವರು ಹೇಳಿದ್ದರು. ನಿಜವಾದ ಸಮಸ್ಯೆಗಳನ್ನು ಪರಿಹರಿಸಲು, ರಾಜಕೀಯ ಪಕ್ಷಗಳಿಂದ ಹಣ ಸ್ವೀಕರಿಸುವ ನಿಬಂಧನೆಗಳಲ್ಲಿ ಅಮೂಲಾಗ್ರ ಬದಲಾವಣೆಗಳು ಬೇಕು ಮತ್ತು ಈ ವಿಷಯದಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಒದಗಿಸಲು ಅಂತಹ ಹಣವನ್ನು ಅವರು ಖರ್ಚು ಮಾಡುವ ವಿಧಾನವು ಬದಲಾಗಬೇಕೆಂದು ಆಯೋಗ ಅಭಿಪ್ರಾಯಪಟ್ಟಿದೆ ಎಂದು ಠಾಕೂರ್ ಲೋಕಸಭೆಗೆ ತಿಳಿಸಿದ್ದರು.
ಚುನಾವಣಾ ಆಯೋಗವು ಒಂದು ರೀತಿಯಲ್ಲಿ ಚುನಾವಣೆಗಳಿಗೆ ರಾಜ್ಯ ಧನ ಸಹಾಯ ನೀಡುವ ಪ್ರಧಾನ ಮಂತ್ರಿಗಳ ಸಲಹೆಯನ್ನು ತಿರಸ್ಕರಿಸಿದೆ. 2016ರಲ್ಲಿ ನೋಟು ಅಮಾನ್ಯಗೊಳಿಸಿದ ಕೂಡಲೇ ಪ್ರಧಾನಿ ಮೋದಿ ಚುನಾವಣಾ ನಿಧಿಯನ್ನು ಸರ್ಕಾರವೇ ಭರಿಸುವ ಯೋಜನೆಯ ಪ್ರಸ್ತಾಪ ಮಾಡಿದ್ದರು. ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಮತ್ತು ಸರ್ಕಾರ ಮತ್ತು ಚುನಾವಣಾ ಯಂತ್ರೋಪಕರಣಗಳು, ಸಿಬ್ಬಂದಿ ಸಮಯವನ್ನು ಉಳಿಸಲು ಲೋಕಸಭೆ ಮತ್ತು ರಾಜ್ಯ ಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಪ್ರಧಾನಿ ಸಲಹೆ ನೀಡಿದ್ದರು. ಚುನಾವಣೆಗೆ ಸರ್ಕಾರದ ಧನ ಸಹಾಯದ ವಿರುದ್ಧ ಭಾರತೀಯ ಚುನಾವಣಾ ಆಯೋಗ ತನ್ನ ಅಭಿಪ್ರಾಯವನ್ನು ಹೇಳಿದ್ದರೂ, ಭಾರತೀಯ ಚುನಾವಣೆಗಳಲ್ಲಿ ಹಣದ ಶಕ್ತಿಯ ಪಾತ್ರವನ್ನು ತಡೆಯಲು ಮತ್ತು ರಾಜಕೀಯ ಧನ ಸಹಾಯದಲ್ಲಿ ಪಾರದರ್ಶಕತೆಯನ್ನು ತರಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದ್ದಾರೆ.
ನಗದು ವಹಿವಾಟುಗಳನ್ನು ನಿರುತ್ಸಾಹಗೊಳಿಸಲು ಮತ್ತು ರಾಜಕೀಯ ಧನ ಸಹಾಯದ ಮೂಲಗಳಲ್ಲಿ ಪಾರದರ್ಶಕತೆ ತರಲು ಸರ್ಕಾರವು ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತಂದಿದೆ ಮತ್ತು ಅನಾಮಧೇಯ ನಗದು ದೇಣಿಗೆಗಳನ್ನು ಗರಿಷ್ಠ 2000ರೂ.ಗಳಿಗೆ ಸೀಮಿತಗೊಳಿಸಿದೆ ಎಂದು ಠಾಕೂರ್ ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ. ಚುನಾವಣೆಗೆ ಧನ ಸಹಾಯ ಮಾಡುವ ವಿರುದ್ಧ ಆಯೋಗವು ತನ್ನ ಅಭಿಪ್ರಾಯವನ್ನು ಹೇಳಿದೆ. ಆದಾಗ್ಯೂ ಸುಸ್ಥಾಪಿತ ಲೆಕ್ಕಪರಿಶೋಧಕ ಹಾದಿಗಳೊಂದಿಗೆ ಭಾರತದಲ್ಲಿ ರಾಜಕೀಯ ಧನ ಸಹಾಯದಲ್ಲಿ ಪಾರದರ್ಶಕತೆ ಸ್ಥಾಪಿಸಲು ಸರ್ಕಾರವು 2018 ರಲ್ಲಿ ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಆದರೆ ಪ್ರಶ್ನೆಯೆಂದರೆ, ಸರ್ಕಾರವು ಪರಿಚಯಿಸಿದ ಕಾನೂನುಗಳಲ್ಲಿನ ಬದಲಾವಣೆಗಳು ವಿಶೇಷವಾಗಿ ಚುನಾವಣಾ ಬಾಂಡ್‌ಗಳು ರಾಜಕೀಯ ಧನ ಸಹಾಯದಲ್ಲಿ ಪಾರದರ್ಶಕತೆಯನ್ನು ತರಲು ಸಹಾಯ ಮಾಡಿವೆಯೆ? ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ಹಣವನ್ನು ಹೇಗೆ ನಿರ್ವಹಿಸುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪಾರದರ್ಶಕತೆಯನ್ನು ತರುವ ಬದಲು, ರಾಜಕೀಯ ಧನಸಹಾಯವನ್ನು ಹೆಚ್ಚು ರಹಸ್ಯವಾಗಿ ಮತ್ತು ಸುಸ್ಥಾಪಿತ ದೊಡ್ಡ ರಾಜಕೀಯ ಪಕ್ಷಗಳಿಗೆ ಅನುಕೂಲಕರವಾಗಿಸಲು ಇದು ಕಾರಣವಾಗಿದೆ. ಹೊಸದಾಗಿ ಸ್ಥಾಪಿಸಲಾದ ಸಣ್ಣ ಪ್ರಾದೇಶಿಕ ಪಕ್ಷಗಳು ಅನಿವಾರ್ಯವಾಗಿ ಇದನ್ನು ಸ್ವೀಕರಿಸಬೇಕಾಗಿದೆ.
2018 ರ ಜನವರಿಯಲ್ಲಿ ಪರಿಚಯಿಸಲಾದ ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ ಧನ ಸಹಾಯ ನೀಡುವ ಹೊಸ ವ್ಯವಸ್ಥೆಯು, ಯಾವುದೇ ಭಾರತೀಯ ನಾಗರಿಕ ಅಥವಾ ಭಾರತ ಮೂಲದ ಕಂಪನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಯ್ದ ಶಾಖೆಗಳಿಂದ ಒಂದು ಸಾವಿರ, ಹತ್ತು ಸಾವಿರ, ಒಂದು ಲಕ್ಷ ರೂ, ಹತ್ತು ಲಕ್ಷ ಮತ್ತು ಒಂದು ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದು ಮತ್ತು ಹದಿನೈದು ದಿನಗಳಲ್ಲಿ ತಮ್ಮದೇ ಆದ ರಾಜಕೀಯ ಪಕ್ಷಗಳಿಗೆ ಇದನ್ನು ದೇಣಿಗೆಯಾಗಿ ನೀಡಬಹುದು. ಅದನ್ನು ಸ್ವೀಕರಿಸುವ ರಾಜಕೀಯ ಪಕ್ಷಗಳು ಇತ್ತೀಚಿನ ಚುನಾವಣೆಯಲ್ಲಿ, ರಾಜ್ಯ ವಿಧಾನಸಭೆ ಅಥವಾ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ ಚಲಾಯಿಸಿದ ಒಟ್ಟು ಮತಗಳಲ್ಲಿ ಕನಿಷ್ಠ ಒಂದು ಶೇಕಡಾ ಮತಗಳನ್ನು ಗಳಿಸಿರಬೇಕು ಎಂದು ಈ ನೀತಿ ಹೇಳುತ್ತದೆ. ವ್ಯವಸ್ಥೆಯಲ್ಲಿನ ಬದಲಾವಣೆ ಕನಸಿನೊಂದಿಗೆ ಹೊಸದಾಗಿ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಇದು ಒಂದು ಗಂಭೀರವಾದ ಸವಾಲನ್ನು ಒಡ್ಡುತ್ತದೆ, ಏಕೆಂದರೆ ಒಂದು ಶೇಕಡಾ ಮತಗಳನ್ನು ಪಡೆಯುವುದು ಸುಲಭವಲ್ಲ, ಆದರೆ ಈಗಾಗಲೇ ಬೇರೂರಿರುವ ರಾಜಕೀಯ ಪಕ್ಷಗಳಿಗೆ ಇದು ಸುಲಭದ ಹಾದಿ.
ರಾಜಕೀಯ ನಿಧಿಯಲ್ಲಿ ಪಾರದರ್ಶಕತೆ ತರಲು ಚುನಾವಣಾ ಬಾಂಡ್‌ಗಳು ಸಹ ಸಹಾಯ ಮಾಡುವುದಿಲ್ಲ. ಕಾನೂನಿನ ಪ್ರಕಾರ, ರಾಜಕೀಯ ಪಕ್ಷಗಳಿಗೆ ಬಾಂಡ್‌ಗಳನ್ನು ದಾನ ಮಾಡುವವರ ಗುರುತನ್ನು ರಹಸ್ಯವಾಗಿಡಬೇಕು. ರಾಜಕೀಯದಲ್ಲಿ ಕಪ್ಪು ಹಣದ ಪಾತ್ರವನ್ನು ನಿಗ್ರಹಿಸಲು ಸಹಾಯ ಮಾಡುವ ಬದಲು, ಗುರುತಿನ ಗೌಪ್ಯತೆಯು ವ್ಯಕ್ತಿಗಳು ಮತ್ತು ಕಂಪೆನಿಗಳು ತಮ್ಮ ಕಪ್ಪು ಹಣವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆಗಾಗಿ ಪರಿವರ್ತನೆ ಮಾಡಲು ಪ್ರೋತ್ಸಾಹಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಚುನಾವಣಾ ಪ್ರಕ್ರಿಯೆಯನ್ನು ಸುಧಾರಿಸುವ ಬದಲು, ನಾವು ವ್ಯವಸ್ಥೆಯನ್ನು ಅಪಾರದರ್ಶಕವಾಗಿಸಲು ಮತ್ತು ಹೆಚ್ಚು ಗೌಪ್ಯವಾಗಿಸಲು ಶ್ರಮಿಸಿದ್ದೇವೆ, ಆದರೆ ನಿಜವಾದ ಸುಧಾರಣೆಗಳ ರೂಪದಲ್ಲಿ ಸ್ವಲ್ಪವೇ ಮಾಡಲಾಗಿದೆ. ರಾಜಕೀಯ ಪಕ್ಷಗಳ ವಿದೇಶಿ ಧನಸಹಾಯವನ್ನು ಅನುಮತಿಸುವ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ) ತಿದ್ದುಪಡಿ ಅಪಾಯಕಾರಿ ಪ್ರಗತಿಯಾಗಿದೆ. ಅಂತಹ ಮೂಲಗಳಿಂದ ಬರುವ ಕೊಡುಗೆಗಳು ಸ್ವಭಾವತಃ ಸಂಶಯಾಸ್ಪದವಾಗಬಹುದು ಮತ್ತು ದೇಣಿಗೆದಾರನ ಗುರುತನ್ನು ಮರೆ ಮಾಡಬಹುದು. ದೀರ್ಘಾವಧಿಯಲ್ಲಿ, ವಿದೇಶಗಳಿಂದ ನಮ್ಮ ದೇಶದಲ್ಲಿ ಹರಿಯುವ ಹಣವು ನಮ್ಮ ರಾಜಕೀಯ ವ್ಯವಸ್ಥೆಯ ಮೇಲೆ ಪರೋಕ್ಷವಾಗಿ ಪ್ರಭಾವ ಬೀರಬಹುದು.
ಚುನಾವಣಾ ಪ್ರಕ್ರಿಯೆಯನ್ನು ಸುಧಾರಿಸುವ ಭರವಸೆಯೊಂದಿಗೆ ಪ್ರಾರಂಭಿಸಿದ, ಚುನಾವಣಾ ಬಾಂಡ್‌ಗಳ ಲೋಪದೋಷಗಳು ಮತ್ತು ನ್ಯೂನತೆಗಳು ಭಾರತೀಯ ಚುನಾವಣೆಯಲ್ಲಿ ಹಣದ ಶಕ್ತಿಯ ಪಾತ್ರವನ್ನು ತಡೆಯುವ ಸವಾಲುಗಳನ್ನು ಮಾತ್ರ ಎತ್ತಿ ತೋರಿಸುತ್ತವೆ. ಚುನಾವಣಾ ಬಾಂಡ್‌ಗಳು, ರಾಜಕೀಯ ಪಕ್ಷಗಳ ಧನಸಹಾಯ ಮತ್ತು ಅದರ ಸುತ್ತಲಿನ ಅಭಿಪ್ರಾಯಗಳ ಬಗ್ಗೆ ದೀರ್ಘಕಾಲದ ವಾದಗಳಿಗೆ ಮರುಜೀವ ನೀಡಲು ಮಾತ್ರ ಸಹಾಯ ಮಾಡಿದೆ. ಚುನಾವಣಾ ರಾಜಕೀಯವನ್ನು ಸುಧಾರಿಸುವ ವ್ಯಾಪಕ ಕ್ರಮಗಳತ್ತ ನಾವು ಯೋಚಿಸಬೇಕಿದೆ. ಅನೇಕ ರಾಜಕೀಯ ಪಕ್ಷಗಳು ಚುನಾವಣಾ ಸುಧಾರಣೆಗಳ ಬಗೆಗಿನ ತನ್ನ ಬದ್ಧತೆಯನ್ನು ಪುನರುಚ್ಚರಿಸಿದ್ದರೂ, ಅದನ್ನು ಸುಧಾರಿಸುವ ಕಾಲ ಬಂದಾಗ ಅವರ ಬದ್ಧತೆಯು ಕಡಿಮೆ ಆಗಿದ್ದು, ಸುಧಾರಣೆಯ ಅಗತ್ಯವಿರುವ ಪ್ರಸ್ತುತ ವ್ಯವಸ್ಥೆಯಿಂದಲೇ ಅವರು ಲಾಭ ಪಡೆಯುತ್ತಿರುವುದು ವಿಪರ್ಯಾಸ.