ನವದೆಹಲಿ: ಅತ್ತ ಚೀನಾದ 59 ಮೊಬೈಲ್ ಆ್ಯಪ್ಗಳನ್ನು ಬ್ಯಾನ್ ಮಾಡಲು ಭಾರತ ಸರ್ಕಾರ ಆದೇಶ ನೀಡಿದ್ದು, ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ 'ಮೇಕ್ ಇನ್ ಇಂಡಿಯಾ' ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿ ಹೇಳೋದು ಮೇಕ್ ಇನ್ ಇಂಡಿಯಾ, ಮಾಡೋದು ಚೀನಾದಿಂದ ಖರೀದಿ: ರಾಹುಲ್ ಗಾಂಧಿ
2014 ರ ಬಳಿಕ ಭಾರತದಲ್ಲಿ ಚೀನಾ ಉತ್ಪನ್ನಗಳ ಆಮದಿನ ಪ್ರಮಾಣ ಹೆಚ್ಚಾಗಿದೆ ಎಂದು ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
"ಸತ್ಯಗಳು ಎಂದಿಗೂ ಸುಳ್ಳಾಗುವುದಿಲ್ಲ. ಬಿಜೆಪಿ ಹೇಳುವುದು ಮೇಕ್ ಇನ್ ಇಂಡಿಯಾ ಎಂದು, ಆದರೆ ಮಾಡುವುದು ಮಾತ್ರ ಚೀನಾದಿಂದ ಖರೀದಿ. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಹೆಚ್ಚಾಗಿದೆ" ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
2008 ರಿಂದ 2014 ರವರೆಗೆ ಕಾಂಗ್ರೆಸ್ನ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಚೀನಾದಿಂದ ಆಮದು ಮಾಡಿಕೊಂಡಿರುವ ಪ್ರಮಾಣ ಶೇ.14 ಕ್ಕಿಂತ ಕಡಿಮೆಯಿದೆ. ಆದರೆ ಬಿಜೆಪಿಯ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಇದು ಶೇ.18ಕ್ಕೆ ಏರಿಕೆಯಾಗಿದೆ ಎನ್ನುವುದನ್ನು ಗ್ರಾಫ್ ಮೂಲಕ ಟ್ವೀಟ್ನಲ್ಲಿ ರಾಗಾ ತೋರಿಸಿದ್ದಾರೆ.