ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯ ಬಳಿಕ ಎಲ್ಲ ರಾಜಕೀಯ ಪಕ್ಷಗಳಲ್ಲಿ ಚುನಾವಣೆ ಚಟುವಟಿಕೆಗಳು ಗರಿಗೆದರಿವೆ.
ದೆಹಲಿ ವಿಧಾನಸಭೆ ಚುನಾವಣೆ ಫೆಬ್ರವರಿ 8ರಂದು ಒಂದೇ ಹಂತದಲ್ಲಿ ನಡೆಯಲಿದ್ದು, 11ರಂದು ಮತ ಎಣಿಕೆ ನಡೆಯಲಿದೆ. 70 ಸದಸ್ಯ ಬಲದ ವಿಧಾನಸಭೆಯ ಅವಧಿ ಫೆಬ್ರವರಿ 22ರಂದು ಕೊನೆಗೊಳ್ಳಲಿದೆ. ಎಲ್ಲ ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ.
ಪಕ್ಷದ ಮುಖಂಡರಾದ ಜೆ.ಪಿ ನಡ್ಡಾ, ಪ್ರಕಾಶ್ ಜಾವಡೇಕರ್, ಮನೋಜ್ ತಿವಾರಿ, ವಿಜಯ್ ಗೋಯಲ್, ವಿಜೇಂದ್ರ ಗುಪ್ತ ಮತ್ತು ಅನಿಲ್ ಜೈನ್ ಪಾಲ್ಗೊಂಡಿದ್ದರು. ದೆಹಲಿ ವಿಧಾನಸಭೆಯ ಒಟ್ಟು 70 ಸ್ಥಾನಗಳ ಪೈಕಿ 45 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆಡಳಿತಾರೂಢ ಆಪ್ ಪಕ್ಷವನ್ನು ಹಣೆಯಲು ಬಿಜೆಪಿ ಸಜ್ಜಾಗಿದೆ. ಅಭ್ಯರ್ಥಿಗಳ ಆಯ್ಕೆ, ಚುನಾವಣೆಯ ಪ್ರಚಾರದ ರಣತಂತ್ರ ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ ಪಕ್ಷದ ವರಿಷ್ಠರು ಸಭೆ ನಡೆಸಿದರು.
ದೆಹಲಿಯ ಎಲ್ಲ ಘಟಕಗಳಿಂದ ಮಾಹಿತಿ ಪಡೆದು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಸಿದ್ಧಪಡಿಸಿದೆ. 70 ಕ್ಷೇತ್ರಗಳಿಗೆ ಸುಮಾರು 1300ಕ್ಕೂ ಅಧಿಕ ಮಂದಿ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ ಎಂದು ಹೇಳಲಾಗುತ್ತಿದೆ. ಆಯ್ದುಕೊಂಡು ಸೂಕ್ತ ಗೆಲ್ಲುವ ಅಭ್ಯರ್ಥಿಗಳನ್ನು 70 ಕ್ಷೇತ್ರಗಳಲ್ಲಿ ಕಣಕ್ಕಿಳಿಸಲು ಬಿಜೆಪಿ ತಯಾರಿ ನಡೆಸುತ್ತಿದೆ ಎನ್ನಲಾಗುತ್ತಿದೆ.