ಬಿಹಾರ ಷರೀಫ್ (ಬಿಹಾರ):ಮಹಿಳೆಯ ಪರ್ಸ್ ಕಸಿದುಕೊಂಡಿದ್ದಕ್ಕಾಗಿ ಬಂಧನಕ್ಕೊಳಗಾದ 16 ವರ್ಷದ ಬಾಲಕನಿಗೆ ಬಿಹಾರದ ನಳಂದಾ ಜಿಲ್ಲಾ ನ್ಯಾಯಾಲಯವು ಕ್ಷಮಾದಾನ ನೀಡಿದೆ.
ರಾಷ್ಟ್ರವ್ಯಾಪಿ ಲಾಕ್‌ಡೌನ್ ಕಾರಣ ಈ ಬಾಲಾಪರಾಧಿಯ ಸಹೋದರ ಹಾಗೂ ಮಾನಸಿಕ ರೋಗಿ ತಾಯಿ ಹಲವಾರು ದಿನಗಳಿಂದ ಉಪವಾಸವಿದ್ದರು. ಅವರಿಗೆ ಊಟ ಮಾಡಿಸುವ ಸಲುವಾಗಿ ಬಾಲಕ ಮಹಿಳೆಯೊಬ್ಬಳ ಪರ್ಸ್ ಕಸಿದಿದ್ದಾನೆ ಎನ್ನಲಾಗಿದೆ.
ಬಾಲಾಪರಾಧಿ ನ್ಯಾಯ ಮಂಡಳಿಯ ಮ್ಯಾಜಿಸ್ಟ್ರೇಟ್ ಮಾನವೇಂದ್ರ ಮಿಶ್ರಾ ಅವರು ಬಾಲಕನ ಕುಟುಂಬಕ್ಕೆ ಸರ್ಕಾರಿ ಯೋಜನೆಯಡಿ ವಸತಿ ಮತ್ತು ಪಡಿತರವನ್ನು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಏಪ್ರಿಲ್ 17ರಂದು ಬಾಲಕ ಇಸ್ಲಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುಕಟ್ಟೆಯಲ್ಲಿ ಮಹಿಳೆಯ ಪರ್ಸ್ ಕಸಿದುಕೊಂಡಿದ್ದ. ಆತನನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಗುರುತಿಸಿ, ಅದೇ ದಿನ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.