ಹೈದರಾಬಾದ್:ತೆಲಂಗಾಣ ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಗೋದಾವರಿಯ ತಿಮ್ಮಪುರಂ ಗ್ರಾಮದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದ್ದರಿಂದ ಶಿಕ್ಷಕರೊಬ್ಬರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹಗ್ಗದ ಸಹಾಯದಿಂದ ಶಾಲೆಗೆ ಆಗಮಿಸಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.
ಅಜ್ಮೀರ್ ರುಪ್ಲಾ ಮೆಹಬೂಬ್ ಜಿಲ್ಲೆಯ ಗುದೂರ್ ವಲಯದ ಚಕ್ರತಂಡಾ ಮೂಲದವರಾಗಿದ್ದು, ಗೋದಾವರಿಯ ತಿಮ್ಮಪುರಂ ಗ್ರಾಮದಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸೋಮವಾರ ಶಾಲೆಗೆ ತೆರಳುವ ಸಲುವಾಗಿ ದ್ವಿಚಕ್ರ ವಾಹನದ ಮೂಲಕ ಗ್ರಾಮಕ್ಕೆ ತಲುಪಿದ ಶಿಕ್ಷಕ ಪ್ರವಾಹದ ಸ್ಥಿತಿಯಿಂದ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಈ ವೇಳೆ ತಮ್ಮ ಪ್ರಾಣವನ್ನೂ ಲೆಕ್ಕಿಸದ ಶಿಕ್ಷಕ ಹಗ್ಗದ ಮೂಲಕ ಹಳ್ಳವನ್ನು ದಾಟಿ ಕರ್ತವ್ಯಕ್ಕೆ ಹಾಜರಾಗಿದ್ದು, ಸಂಜೆ ಪುನಃ ಇದೇ ರೀತಿ ಪ್ರಯತ್ನಿಸಿ ಮನೆಗೆ ತಲುಪಿದ್ದಾರೆ.
ಶಿಕ್ಷಕನ ಕರ್ತವ್ಯ ನಿಷ್ಠೆಯನ್ನು ಕಂಡು ಪ್ರಶಂಸೆ ವ್ಯಕ್ತಪಡಿಸಿರುವ ಗ್ರಾಮಸ್ಥರು, ಇನ್ನಾದರೂ ಅಧಿಕಾರಿಗಳು ಶೀಘ್ರವಾಗಿ ಸ್ಪಂದಿಸಿ ತಮ್ಮ ಗ್ರಾಮಕ್ಕೆ ರಸ್ತೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.