ನವದೆಹಲಿ:ದೇಶಾದ್ಯಂತ 121 ಪೊಲೀಸ್ ಸಿಬ್ಬಂದಿಗೆ 'ತನಿಖೆಯಲ್ಲಿ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕ' ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕದ ನಾಲ್ವರು ಪೊಲೀಸ್ ಸಿಬ್ಬಂದಿ ಸೇರಿದಂತೆ 6 ಮಂದಿಗೆ ಗೃಹ ಸಚಿವರ ಪದಕ ನೀಡುವುದಾಗಿ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ. ಅಸಿಸ್ಟೆಂಟ್ ಕಮೀಷನರ್ ಆಫ್ ಪೊಲೀಸ್ ಸುಧೀರ್ ಎಂ. ಹೆಗ್ಡೆ, ಡಿವೈಎಸ್ಪಿ ಡಿ.ಅಶೋಕ್, ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಡಿ.ಎಂ ಹಾಗೂ ಹೆಡ್ ಕಾನ್ಸ್ಟೇಬಲ್ ಶ್ರೀಧರ.ಹೆಚ್.ಎಸ್ ಅವರಿಗೆ ಪದಕ ದೊರೆಯಲಿದೆ. ಇದರ ಜೊತೆಗೆ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬಿಐ ಅಧಿಕಾರಿಗಳಾದ ರಾಕೇಶ್ ರಂಜನ್ ಹಾಗೂ ವಿಜಯ ವೈಷ್ಣವಿ ಅವರಿಗೂ ಕೂಡಾ ಪದಕ ಸಿಗಲಿದೆ.
ಕೇಂದ್ರ ಅಪರಾಧ ದಳದ 15 ಸಿಬ್ಬಂದಿ, ಮಧ್ಯಪ್ರದೇಶದ ಹಾಗೂ ಮಹಾರಾಷ್ಟ್ರದ ತಲಾ 10 ಸಿಬ್ಬಂದಿ, ಉತ್ತರ ಪ್ರದೇಶದ 8, ಕೇರಳ ಮತ್ತು ಪಶ್ಚಿಮ ಬಂಗಾಳದ ತಲಾ 8 ಸಿಬ್ಬಂದಿಗೆ ಮತ್ತು ಇತರ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕೆಲವು ಸಿಬ್ಬಂದಿಗೆ ಪದಕ ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ ನೀಡಿದೆ.
ಒಟ್ಟು 121 ಮಂದಿಯಲ್ಲಿ 21 ಮಂದಿ ಮಹಿಳೆಯರಿದ್ದು, ಕಾನ್ಸ್ಟೇಬಲ್ನಿಂದ ಡಿಸಿಪಿ ರ್ಯಾಂಕ್ವರೆಗೆ ಪದಕ ನೀಡಲಾಗುತ್ತದೆ. ಹಿಂದಿನ ಬಾರಿ ಸುಮಾರು 96 ಸಿಬ್ಬಂದಿಗೆ ಕೇಂದ್ರ ಗೃಹ ಸಚಿವರ ಪದಕ ನೀಡಲಾಗಿದೆ.
2018ರಿಂದ ತನಿಖೆಯಲ್ಲಿ ಪರಿಣತಿ ಪಡೆದ ಪೊಲೀಸ್ ಹಾಗೂ ಇತರ ವಿಭಾಗದ ಸಿಬ್ಬಂದಿಗೆ ಕೇಂದ್ರ ಗೃಹ ಸಚಿವರ ಪದಕ ನೀಡಲಾಗುತ್ತಿದ್ದು, ಈ ಮೂಲಕ ತನಿಖೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.