ಅಮೃತಸರ (ಪಂಜಾಬ್): ಕಸ್ಟಮ್ಸ್ ಕಮಿಷನರೇಟ್ ಎರಡು ದಿನಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರು ಪ್ರಯಾಣಿಕರಿಂದ ವಿದ್ಯುತ್ ಉಪಕರಣಗಳಲ್ಲಿ ಅಡಗಿಸಿಟ್ಟಿದ್ದ ಸುಮಾರು 5 ಕೋಟಿ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ವಂದೇ ಭಾರತ್' ಮಿಷನ್ ಅಡಿ ದುಬೈನಿಂದ ಬಂದ ಪ್ರಯಣಿಕರನ್ನು ತಡೆ ಹಿಡಿಯಲಾಗಿದೆ ಎಂದು ಕಸ್ಟಮ್ಸ್ ಆಯುಕ್ತ ದೀಪಕ್ ಕುಮಾರ್ ಗುಪ್ತಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಲೆಕ್ಟ್ರಿಕ್ ಐರನ್, ಡ್ರಿಲ್ ಮಷಿನ್, ಮಿಕ್ಸರ್ ಗ್ರೈಂಡರ್ ಹಾಗೂ ಜ್ಯೂಸರ್ನಂತಹ ವಿವಿಧ ಗೃಹೋಪಯೋಗಿ ಉಪಕರಣಗಳಲ್ಲಿ ಚಿನ್ನ ಅಡಗಿಸಿಡಲಾಗಿತ್ತು ಎಂದು ಅವರು ಹೇಳಿದ್ದಾರೆ.
"ವಶಪಡಿಸಿಕೊಂಡಿರುವ ಚಿನ್ನ 24 ಕ್ಯಾರೆಟ್ ಶುದ್ಧತೆ ಹೊಂದಿದೆ. ಎಲ್ಲ ಪ್ರಯಾಣಿಕರಿಂದ ಪಡೆದ ಚಿನ್ನ ಒಟ್ಟು 10.22 ಕೆಜಿ ತೂಕವಿದ್ದು, ಪ್ರಸ್ತುತ ಮಾರುಕಟ್ಟೆ ಮೌಲ್ಯ ಅಂದಾಜು 5 ಕೋಟಿ ರೂ. ಆಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ" ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.