ಕರ್ನಾಟಕ

karnataka

ETV Bharat / bharat

ಕೇಸರಿ - ಬಿಳಿ-ಹಸಿರು ಬಣ್ಣದಲ್ಲಿ ಮೂಡಿಬಂದ ಸಾಬಕ್ಕಿ ಗಣೇಶ.. - Maharashtra

ಪ್ರತಿ ವರ್ಷ ವಿಭಿನ್ನ ಗಣೇಶ ವಿಗ್ರಹವನ್ನು ತಯಾರಿಸುವ ಬಂಗಾಳ ಮೂಲದ ಶಿಲ್ಪಿಯೊಬ್ಬರು ಈ ಬಾರಿ ಸಾಬಕ್ಕಿಯನ್ನು ಬಳಸಿ ಕೇಸರಿ - ಬಿಳಿ-ಹಸಿರು ಬಣ್ಣದ ಮೂರ್ತಿ ನಿರ್ಮಿಸಿದ್ದಾರೆ.

ಸಾಬಕ್ಕಿ ಗಣೇಶ
ಸಾಬಕ್ಕಿ ಗಣೇಶ

By

Published : Sep 10, 2021, 12:27 PM IST

ಜಲಂಗಾವ್​(ಮಹಾರಾಷ್ಟ್ರ): ಕಡಲೆಕಾಯಿ, ತೆಂಗಿನಕಾಯಿ, ತರಕಾರಿ, ಹಣ್ಣುಗಳು, ಚಾಕೋಲೇಟ್ ಹೀಗೆ ವಿವಿಧ ಪದಾರ್ಥಗಳಿಂದ ಗಣೇಶನ ಮೂರ್ತಿಗಳನ್ನು ತಯಾರಿಸಿರುವುದನ್ನು ಸಾಮಾನ್ಯವಾಗಿ ನೋಡಿರುತ್ತೀರಾ. ಆದರೆ, ಸಾಬಕ್ಕಿ ಗಣೇಶನನ್ನು ಕಂಡಿದ್ದೀರೇ? ಮಹಾರಾಷ್ಟ್ರದ ಜಲಂಗಾವ್​ನಲ್ಲಿ ಬಂಗಾಳಿ ಶಿಲ್ಪಿಯೊಬ್ಬರು ಕೇಸರಿ-ಬಿಳಿ-ಹಸಿರು ಬಣ್ಣದಲ್ಲಿ ಸಾಬಕ್ಕಿ ಗಣೇಶನನ್ನು ತಯಾರಿಸಿ ಗಮನ ಸೆಳೆದಿದ್ದಾರೆ.

ಕೇಸರಿ-ಬಿಳಿ-ಹಸಿರು ಬಣ್ಣದಲ್ಲಿ ಮೂಡಿಬಂದ ಸಾಬಕ್ಕಿ ಗಣೇಶ

ಪಶ್ಚಿಮ ಬಂಗಾಳದ ಕೋಲ್ಕತ್ತಾ ಮೂಲದ ರಾಮಕೃಷ್ಣ ಸಚ್ಚುಗೋಪಾಲ್ ಪಾಲ್ ಎಂಬವರೇ ಈ ಮೂರ್ತಿ ನಿರ್ಮಿಸಿದ ಶಿಲ್ಪಿ. ಇವರು ಕಳೆದ 15 ವರ್ಷಗಳಿಂದ ಜಲಗಾಂವ್‌ನಲ್ಲಿ ಗಣೇಶನ ವಿಗ್ರಹ ತಯಾರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇವರೊಂದಿಗೆ 10-12 ಮಂದಿ ಕೆಲಸಗಾರರೂ ಇದ್ದಾರೆ. ಈ ಹಿಂದೆ ಅವರು ಚಹಾ ಎಲೆ, ಕಡಲೆಕಾಯಿ, ಗೋಡಂಬಿ, ಬಾದಾಮಿ, ಬಿಸ್ಕತ್ತುಗಳು, ತೆಂಗಿನಕಾಯಿ ಮತ್ತು ವಿವಿಧ ಹಣ್ಣುಗಳಿಂದ ಗಣೇಶನ ವಿಗ್ರಹಗಳನ್ನು ತಯಾರಿಸಿದ್ದಾರೆ. ಈ ಬಾರಿ ಸಾಬಕ್ಕಿಯನ್ನು ಬಳಸಿ 5 ಅಡಿ ಎತ್ತರದ ಮೂರ್ತಿ ನಿರ್ಮಿಸಿದ್ದಾರೆ.

ಈ ಗಣಪನಿಗೆ ಬಳಸಿದ ಸಾಬಕ್ಕಿ ಎಷ್ಟು ಪ್ರಮಾಣದ್ದು ಗೊತ್ತಾ?

ಕಳೆದ ವರ್ಷ ಮಧ್ಯಪ್ರದೇಶದ ಖೇಟಿಯಾದ ಗಣೇಶ ಮಂಡಳಿಯೊಂದು ಅವರಿಂದ ತೆಂಗಿನಕಾಯಿ ಗಣೇಶ ಮೂರ್ತಿಯನ್ನು ಖರೀದಿಸಿತ್ತು. ಈ ವರ್ಷ, ಅದೇ ಗಣೇಶ ಮಂಡಳಿಯು ಸ್ವಲ್ಪ ವಿಭಿನ್ನ ಪರಿಕಲ್ಪನೆಯ ಮೇಲೆ ಗಣೇಶ ಮೂರ್ತಿಯನ್ನು ಮಾಡಲು ವಿನಂತಿಸಿದ್ದರು. ಅದರಂತೆ, ರಾಮಕೃಷ್ಣ ಪಾಲ್ ಮಣ್ಣಿನಿಂದ ಗಣೇಶ ಮೂರ್ತಿ ತಯಾರಿಸಿ, ಅದರ ಮೇಲೆ ಸಾಬಕ್ಕಿಯನ್ನು ಅಂಟಿಸಿ, ರಾಷ್ಟ್ರ ಧ್ವಜದ ತ್ರಿವರ್ಣಗಳಾದ ಕೇಸರಿ - ಬಿಳಿ-ಹಸಿರು ಬಣ್ಣವನ್ನು ಬಳಿದಿದ್ದಾರೆ. ಇದಕ್ಕಾಗಿ ಅವರು 50 ಕೆಜಿ ಸಾಬಕ್ಕಿಯನ್ನು ಬಳಸಿದ್ದು, 20 ದಿನಗಳನ್ನು ತೆಗೆದುಕೊಂಡಿದ್ದಾರೆ.

ಸಾಬಕ್ಕಿ ಗಣಪನ ಬೆಲೆ ಎಷ್ಟು?

"ಮಧ್ಯಪ್ರದೇಶದ ಗಣೇಶ ಮಂಡಳಿಯು 15 ಸಾವಿರ ರೂ. ಹಣ ನೀಡಿ ಇದನ್ನು ಖರೀದಿಸಿದ್ದಾರೆ. ಕೋವಿಡ್​ನಿಂದಾಗಿ ಕಳೆದೆರಡು ವರ್ಷಗಳಿಂದ ನಮ್ಮ ವ್ಯಾಪಾರಕ್ಕೆ ಪೆಟ್ಟು ನೀಡಿದೆ. ನಾವು ಹಸಿವಿನಿಂದ ಬಳಲುತ್ತಿದ್ದೇವೆ. ಈ ವರ್ಷ ನಾವು ಕೇವಲ 30 ಮೂರ್ತಿಗಳನ್ನು ತಯಾರಿಸಿದ್ದು, ಇವುಗಳಲ್ಲಿ 15 ಮೂರ್ತಿಗಳು ಮಾತ್ರ ಬುಕ್ ಆಗಿದೆ" ಎಂದು ಈಟಿವಿ ಭಾರತದೊಂದಿಗೆ ರಾಮಕೃಷ್ಣ ಪಾಲ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details