ಹೈದರಾಬಾದ್, ಮಹಾರಾಷ್ಟ್ರ: ಕರ್ನಾಟಕದ ಬೆಳಗಾವಿಯಲ್ಲಿ ವಾಸವಾಗಿರುವ ಕಿಲಾಡಿ ದಂಪತಿ ಅಗ್ಗದ ದರಕ್ಕೆ ವಿಮಾನ ಟಿಕೆಟ್ ಮತ್ತು ಕಡಿಮೆ ಬೆಲೆಗೆ ಐಫೋನ್ ನೀಡುವುದಾಗಿ ಹೇಳಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನು ಮುತ್ತಿನನಗರಿಯಲ್ಲಿ ಬೀಡು ಬಿಟ್ಟ ಬೆಳಗಾವಿ ದಂಪತಿ ಸೆರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಮೆಟ್ರೋ ನಗರಗಳ ಟ್ರಾವೆಲ್ ಏಜೆನ್ಸಿಗಳ ಟಾರ್ಗೆಟ್ ಮಾಡಿದ ಈ ದಂಪತಿ ಹೈದರಾಬಾದ್, ಗೋವಾ, ಬೆಂಗಳೂರು, ಮಂಗಳೂರು, ಕೋಲ್ಕತ್ತಾ, ಮುಂಬೈ ಮುಂತಾದ ನಗರಗಳಿಗೆ ಕಡಿಮೆ ಬೆಲೆಯಲ್ಲಿ ಟಿಕೆಟ್ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿದ್ದರು. ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದಲ್ಲಿ ದಂಪತಿಗೆ ಸಂಬಂಧಿಕರಿದ್ದು, 80 ಸಾವಿರ ಮೌಲ್ಯದ ಐಫೋನ್ ಅನ್ನು ಕೇವಲ ರೂ.45 ಸಾವಿರಕ್ಕೆ ನೀಡುವುದಾಗಿ ಗ್ರಾಹಕರನ್ನು ನಂಬಿಸಲಾಗಿತ್ತು.
ಇದನ್ನು ನಂಬಿದ ಅನೇಕ ಜನರು ಹಣ ನೀಡಿದ್ದರು. ಕೆಲವೇ ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹವಾಗಿತ್ತು. ಹೈದರಾಬಾದ್ನ ಟ್ರಾವೆಲ್ ಏಜೆನ್ಸಿಯೊಂದರ ಪ್ರತಿನಿಧಿಗಳು ವಿಮಾನದ ಟಿಕೆಟ್ ಕಳುಹಿಸುವಂತೆ ಕೇಳಿದಾಗ, ‘ನಾವು ಕೊಡುವುದಿಲ್ಲ.. ನೀವು ಏನು ಬೇಕಾದರೂ ಮಾಡಿಕೊಳ್ಳಿ’ ಎಂದು ಬೆದರಿಕೆ ಹಾಕಿದರು.
ದಂಪತಿಯನ್ನು ನಂಬಿ 20 ಲಕ್ಷ ರೂಪಾಯಿ ನೀಡಿದ ಟ್ರಾವೆಲ್ ಏಜೆನ್ಸಿ ಪ್ರತಿನಿಧಿಗಳು ಬೆಳಗಾವಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳು ಪ್ರಸ್ತುತ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ವಿಚಾರ ತಿಳಿದ ಇತರೆ ಸಂತ್ರಸ್ತರು ದೂರು ನೀಡಲು ಸಿದ್ಧತೆ ನಡೆಸಿದ್ದಾರೆ.
ಡ್ರೀಮ್‌ಫ್ಲೈ ಏವಿಯೇಷನ್ ಹೆಸರಿನಲ್ಲಿ ವಂಚನೆ: ಬೆಳಗಾವಿಯಲ್ಲಿ ನೆಲೆಸಿರುವ ಸುದರ್ಶನ್ ಮತ್ತು ಸುಜಾತಾ ಅವರು ಹಲವಾರು ವರ್ಷಗಳಿಂದ ಡ್ರೀಮ್‌ಫ್ಲೈ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಅಕಾಡೆಮಿ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳು ಮತ್ತು ತಂಡಗಳಿಗೆ ಸಣ್ಣ ವಿಮಾನಗಳು, ವಿವಿಧ ನಗರಗಳಿಗೆ ವಿಮಾನ ಟಿಕೆಟ್‌ಗಳು ಮತ್ತು ಪಂಚತಾರಾ ಹೋಟೆಲ್‌ಗಳಲ್ಲಿ ವಾಸ್ತವ್ಯದ ಮೂಲಕ ಹಣ ತೆಗೆದುಕೊಳ್ಳುತ್ತಿದ್ದಾರೆ.