ನವದೆಹಲಿ:ಭಾರತಕ್ಕೆ ಕೊರೊನಾ ವೈರಸ್ ಕಾಲಿಟ್ಟು ಎರಡು ವರ್ಷಗಳು ಸಂದಿವೆ. ಕೋವಿಡ್ 3ನೇ ಅಲೆಯಲ್ಲಿ ದೇಶ ತತ್ತರಿಸುತ್ತಿರುವ ಈ ವೇಳೆಯಲ್ಲಿ ನಾಳೆಯಿಂದ 2022 - 23ನೇ ಸಾಲಿನ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.
ಸಾಂಕ್ರಾಮಿಕದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಜರ್ಜರಿತರಾಗಿರುವ ಸಾಮಾನ್ಯ ಜನರು ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಕಾಳುಗಳು, ಮಸಾಲೆ ಪದಾರ್ಥಗಳು, ಖಾದ್ಯ ತೈಲ ಸೇರಿದಂತೆ ಆಹಾರ ಪದಾರ್ಥಗಳು, ಪ್ರಯಾಣ ದರ, ಬಟ್ಟೆ, ಶಿಕ್ಷಣ, ವಸತಿ ವೆಚ್ಚ ಕಡಿಮೆಯಾಗಬಹುದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತೆರಿಗೆಗಳು ಮತ್ತು ಇಂಧನ ದರಗಳಲ್ಲಿ ಕಡಿತವಾಗಬಹುದು, ಪಿಂಚಣಿ ಹೆಚ್ಚಾಗಬಹುದು, ಉದ್ಯೋಗಕ್ಕೆ ಉತ್ತೇಜನ ನೀಡಬಹುದು ಎಂದು ಜನರು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.
ಬಹು ಮುಖ್ಯವಾಗಿ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಜನರು ಬಯಸಿದ್ದಾರೆ. ವೈದ್ಯಕೀಯ ವೆಚ್ಚ ಹಾಗೂ ಔಷಧ ಬೆಲೆಗಳಲ್ಲಿ ಇಳಿಕೆಯಾಗಿರಬಹುದು ಎಂದು ಭಾವಿಸಿದ್ದಾರೆ. ಕೋವಿಡ್ ಎರಡನೇ ಅಲೆಯಲ್ಲಿ ಎಷ್ಟೋ ಜನರು ಆಸ್ಪತ್ರೆಯ ಬೆಡ್ ಚಾರ್ಜ್ ಹಾಗೂ ಚಿಕಿತ್ಸಾ ವೆಚ್ಚ ಭರಿಸಲಾಗದೆ ಕ್ರೌಡ್ ಫಂಡಿಂಗ್ ಮೊರೆ ಹೋದ ಉದಾಹರಣೆಗಳೂ ನಮ್ಮ ಮುಂದಿದೆ.
ಇದನ್ನೂ ಓದಿ: Budget 2022: ಈ ಸಲವೂ ಕಾಗದ ರಹಿತ ಬಜೆಟ್, ಮೊಬೈಲ್ ಅಪ್ಲಿಕೇಶನ್ನಲ್ಲೂ ಲಭ್ಯ
ಸಾಮಾನ್ಯ ಜೀವನಕ್ಕೆ ಅಗತ್ಯವಿರುವ ಮೂಲಭೂತ ವಸ್ತುಗಳ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿರುವುದು ನಾಳಿನ ಅಧಿವೇಶನದ ಚರ್ಚೆಯ ಪ್ರಮುಖ ವಿಷಯವಾಗಿರಲಿದೆ. ಕುಸಿದಿರುವ ಆರ್ಥಿಕತೆಗೆ ಚೇತರಿಕೆ ಸಿಗಬಹುದೇ ಎಂಬುದು ಎಲ್ಲರ ಮನಸ್ಸಿನಲ್ಲೆದ್ದಿರುವ ಪ್ರಶ್ನೆಯಾಗಿದೆ.
ಈ ಬಾರಿಯ ಬಜೆಟ್ ಸಂಬಂಧಿತ ಕೆಲ ಅಂಶಗಳು ಹೀಗಿವೆ..
1) ಕಳೆದ ವರ್ಷದಂತೆ ಈ ಸಲದ ಬಜೆಟ್ ಕೂಡ ಕಾಗದ ರಹಿತವಾಗಿ ಮಂಡನೆಯಾಗಲಿದೆ. ಆದರೆ, ಡಿಜಿಟಲ್ ರೂಪಕ್ಕೆ ಮತ್ತಷ್ಟು ಪುಷ್ಠಿ ನೀಡುವ ನಿಟ್ಟಿನಲ್ಲಿ ಮೊಬೈಲ್ ಅಪ್ಲಿಕೇಶನ್ ತಯಾರಿಸಲಾಗಿದೆ. 'ಯೂನಿಯನ್ ಬಜೆಟ್' ಹೆಸರಿನಲ್ಲಿ ಮೊಬೈಲ್ ಅಪ್ಲಿಕೇಶನ್ ಲಭ್ಯವಿದ್ದು, ರಾಷ್ಟ್ರೀಯ ಮಾಹಿತಿ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಇದನ್ನ ಅಭಿವೃದ್ಧಿಪಡಿಸಿದೆ. ಸಂಸತ್ನಲ್ಲಿ ಬಜೆಟ್ ಮಂಡನೆಯಾದ ಬಳಿಕ ಇದು ಲಭ್ಯವಾಗಲಿದೆ.