ನವದೆಹಲಿ/ನೋಯ್ಡಾ:ಇತ್ತೀಚಿಗೆ ಗಡಿಯಾಚೆಗಿನ ಪ್ರೇಮ ಕಥೆಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ, ದೇಶದ ಗಡಿಯಾಚೆಗಿನ ವ್ಯಕ್ತಿಗಳ ಜೊತೆ ಮದುವೆ ಸರಣಿ ಪ್ರಕರಣಗಳಿಗೆ ಇನ್ನೊಂದು ಸೇರ್ಪಡೆಯಾಗಿದೆ. ಪಾಕಿಸ್ತಾನದ ಸೀಮಾ ಹೈದರ್ ನಂತರ ಇದೀಗ ಬಾಂಗ್ಲಾದೇಶದ ಮಹಿಳೆಯೊಬ್ಬರು ತನ್ನ ಒಂದು ವರ್ಷದ ಮಗುವಿನೊಂದಿಗೆ ನೋಯ್ಡಾಕ್ಕೆ ಆಗಮಿಸಿದ್ದಾರೆ.
ಮಹಿಳೆ ಭಾರತದ ನಿವಾಸಿ ಸೌರಭಕಾಂತ್ ತಿವಾರಿ ಎಂಬಾತನನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಮದುವೆಯಾಗಿ ಕೆಲವು ಸಮಯದ ನಂತರ ಭಾರತಕ್ಕೆ ಮರಳಿದ ಪತಿ ಬಳಿಕ ಹಿಂದಿರುಗಲಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಮಹಿಳೆಯ 20 ಸೆಕೆಂಡ್ಗಳ ವಿಡಿಯೋ ಮಾಡಿದ್ದಾರೆ. ಇದರಲ್ಲಿ ಮಹಿಳೆ ಪತಿಯನ್ನು ಹುಡುಕಿಕೊಂಡು ಭಾರತಕ್ಕೆ ಬಂದಿರುವ ಬಗ್ಗೆ ಮಾತನಾಡುತ್ತಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸ್ ಕಾರಿನಲ್ಲಿ ಕುಳಿತಿರುವ ಬಾಂಗ್ಲಾ ಮಹಿಳೆಯ ಸುತ್ತ ಮಹಿಳಾ ಪೊಲೀಸರು ಕೂಡ ಇದ್ದಾರೆ.
ಈ ಕುರಿತು ಸೋಮವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ. ಎಸಿಪಿ ಮಹಿಳಾ ಭದ್ರತಾ ಸಿಬ್ಬಂದಿ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ದೂರಿನಲ್ಲಿ ಬಾಂಗ್ಲಾದೇಶದ ಢಾಕಾದ ಮಹಿಳೆಯೊಬ್ಬರು ಸೌರಭಕಾಂತ್ ತಿವಾರಿ ಎಂಬ ಯುವಕ ತನ್ನನ್ನು 14 ಏಪ್ರಿಲ್ 2021ರಂದು ಬಾಂಗ್ಲಾದೇಶದಲ್ಲಿ ವಿವಾಹವಾಗಿದ್ದರು ಎಂದು ಹೇಳಿದ್ದಾರೆ. ಈಗ ಸೌರಭಕಾಂತ್ ಅವರನ್ನು ಬಿಟ್ಟು ಭಾರತಕ್ಕೆ ವಾಪಸ್ ಆಗಿದ್ದಾರೆ. ಈ ನಡುವೆ, ಮಹಿಳೆ ಮತ್ತು ಸೌರಭ್‌ಗೆ ಒಬ್ಬ ಮಗ ಕೂಡ ಜನಿಸಿದ್ದಾನೆ. ಆದರೆ, ಸೌರಭ್ ಈಗಾಗಲೇ ಮದುವೆಯಾಗಿದ್ದು, ಈ ಸಂಗತಿಯನ್ನು ತನ್ನಿಂದ ಮುಚ್ಚಿಟ್ಟಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.