ಭೋಪಾಲ್ (ಮಧ್ಯಪ್ರದೇಶ):ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಬಹುಜನ ಸಮಾಜ ಪಕ್ಷ (BSP) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಈ ಮೂಲಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ, ಚುನಾವಣೆ ಘೋಷಣೆಗೂ ರಣಕಹಳೆ ಮೊಳಗಿಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ರಮಾಕಾಂತ್ ಪಿಪ್ಪಲ್ ಅವರು ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದರು. ಮಾಯಾವತಿ ಆದೇಶದಂತೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದ 230 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಅಭ್ಯರ್ಥಿಗಳ ಹೆಸರನ್ನು ಗುರುವಾರ ಸಂಜೆ ಪಕ್ಷದ ಅಧ್ಯಕ್ಷರ ಸಮ್ಮುಖದಲ್ಲಿ ಪ್ರಕಟಿಸಲಾಗಿದೆ. ರೇವಾ ಜಿಲ್ಲೆಯಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಇಬ್ಬರು ಸತ್ನಾದಿಂದ, ಛತ್ತರ್‌ಪುರ, ನಿವಾರಿ ಮತ್ತು ಮೊರೆನಾ ಜಿಲ್ಲೆಗಳಿಂದ ತಲಾ ಒಬ್ಬರು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಘೋಷಣೆ ಮಾಡಲಾಗಿರುವ ಏಳು ಸ್ಥಾನಗಳ ಪೈಕಿ ಪ್ರಸ್ತುತ ನಾಲ್ಕು ಆಡಳಿತಾರೂಢ ಬಿಜೆಪಿ ಮತ್ತು ಉಳಿದ ಮೂರು ಸ್ಥಾನಗಳು ಕಾಂಗ್ರೆಸ್‌ನ ತೆಕ್ಕೆಯಲ್ಲಿವೆ.
ಪಟ್ಟಿಯಲ್ಲಿ ಸಾಮಾನ್ಯ ವರ್ಗದಿಂದ ಆರು ಅಭ್ಯರ್ಥಿಗಳನ್ನು ಘೋಷಿಸಿದ್ದರೆ, ಪರಿಶಿಷ್ಟ ಜಾತಿಯಿಂದ ಒಬ್ಬ ಅಭ್ಯರ್ಥಿಯ ಹೆಸರನ್ನು ಘೋಷಿಸಲಾಗಿದೆ. ದೇವರಾಜ್ ಅಹಿರ್ವಾಲ್ ಎಸ್‌ಸಿ ಮೀಸಲು ರಾಯಗಾಂವ್ ಕ್ಷೇತ್ರದಿಂದ (ಸತ್ನಾ) ಸ್ಪರ್ಧಿಸಲಿದ್ದು, ಉಳಿದ ಆರು ಅಭ್ಯರ್ಥಿಗಳು ಮೀಸಲು ಅಲ್ಲದ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮೊರೆನಾ ಜಿಲ್ಲೆಯ ದಿಮಾನಿ ಕ್ಷೇತ್ರದಿಂದ ಪಕ್ಷದ ಮಾಜಿ ಶಾಸಕ ಬಲ್ವೀರ್ ಸಿಂಗ್ ದಂಡೋತಿತಾ ಕಣಕ್ಕಿಳಿಯಲಿದ್ದಾರೆ. ಉಳಿದಂತೆ, ಅವದೇಶ್ ಪ್ರತಾಪ್ ಸಿಂಗ್ ರಾಥೋಡ್ ಅವರು ನಿವಾರಿ ಕ್ಷೇತ್ರದಿಂದ (ನಿವಾರಿ), ರಾಜನಗರ ಕ್ಷೇತ್ರದಿಂದ ರಾಮರಾಜ ಪಾಠಕ್ (ಛತ್ತರ್‌ಪುರ), ಮಣಿರಾಜ್ ಸಿಂಗ್ ಪಟೇಲ್ ರಾಮ್‌ಪುರ್ ಅವರು ಬಘೇಲಾನ್ ಕ್ಷೇತ್ರದಿಂದ (ಸತ್ನಾ), ವಿಷ್ಣು ದೇವ್ ಪಾಂಡೆ ಅವರು ಸಿರ್ಮೌರ್ (ರೇವಾ) ಮತ್ತು ಪಂಕಜ್ ಸಿಂಗ್ ಅವರು ಸೈಮರಿಯಾ ಕ್ಷೇತ್ರದಿಂದ (ರೇವಾ) ಸ್ಪರ್ಧಿಸಲಿದ್ದಾರೆ.
ದೂರವಾಣಿ ಮೂಲಕ ಮಾತನಾಡಿದ ಬಿಎಸ್‌ಪಿ ರಾಜ್ಯಾಧ್ಯಕ್ಷ ರಮಾಕಾಂತ್ ಪಿಪ್ಪಲ್, “ನಾವು ರಾಜ್ಯದ ಎಲ್ಲ ವಿಧಾನಸಭಾ ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ. ನಮ್ಮ ಸಮೀಕ್ಷೆ ಪೂರ್ಣಗೊಂಡಿದ್ದು, ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಪಟ್ಟಿಯನ್ನು ಬೇಗ ಬಿಡುಗಡೆ ಮಾಡುವುದರಿಂದ ಆಯಾ ಕ್ಷೇತ್ರಗಳಲ್ಲಿ ಚುನಾವಣಾ ತಯಾರಿಗೆ ತಮ್ಮ ಅಭ್ಯರ್ಥಿಗಳಿಗೆ ಹೆಚ್ಚಿನ ಸಮಯ ಸಿಗಲಿದೆ. ಕೆಲವರು ಈಗಾಗಲೇ ಚುನಾವಣಾ ತಯಾರಿ ಮಾಡಿಕೊಂಡಿದ್ದಾರೆ. ಪಕ್ಷ ಕೂಡ ಸಿದ್ಧತೆಯಲ್ಲಿ ತೊಡಗಿದೆ. 230 ಸದಸ್ಯ ಬಲದ ವಿಧಾನಸಭೆಯನ್ನು ಹೊಂದಿರುವ ಬಿಜೆಪಿ ಆಡಳಿತದ ರಾಜ್ಯದಲ್ಲಿ ಚುನಾವಣೆಗೆ ಬಹುಜನ ಸಮಾಜ ಪಕ್ಷ ಅಭ್ಯರ್ಥಿಗಳನ್ನು ಘೋಷಿಸಿದ ಮೊದಲ ಪಕ್ಷವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ಗಿಂತ ಮೊದಲು ನಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದೇವೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ:Monsoon session: ಮುಂಗಾರು ಅಧಿವೇಶನ ಅಂತ್ಯ; ಲೋಕಸಭೆಯಲ್ಲಿ 22, ರಾಜ್ಯಸಭೆಯಲ್ಲಿ 25 ಮಸೂದೆ ಅಂಗೀಕಾರ